ADVERTISEMENT

ಮಂಗಳೂರು | ಗುರುಪೂರ್ಣಿಮೆ: ಸ್ಮರಣೆ, ವಿಶೇಷ ಪ್ರಾರ್ಥನೆ

ಮಾತಾ ಅಮೃತಾನಂದಮಯಿ ಮಠದಿಂದ ಪಾದಪೂಜೆ; ರಾಮಕೃಷ್ಣ ಮಠದಲ್ಲಿ ಕಾರ್ಯಕ್ರಮ ವೈವಿಧ್ಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 4:27 IST
Last Updated 22 ಜುಲೈ 2024, 4:27 IST
ಮಂಗಳೂರಿನ ಅಮೃತ ವಿದ್ಯಾಲಯದಲ್ಲಿ ಗುರುಪೂರ್ಣಿಮಾ ಪ್ರಯುಕ್ತ ಪಾದಪೂಜೆ ನಡೆಯಿತು –ಪ‍್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
ಮಂಗಳೂರಿನ ಅಮೃತ ವಿದ್ಯಾಲಯದಲ್ಲಿ ಗುರುಪೂರ್ಣಿಮಾ ಪ್ರಯುಕ್ತ ಪಾದಪೂಜೆ ನಡೆಯಿತು –ಪ‍್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್   

ಮಂಗಳೂರು: ಗುರುಪೂರ್ಣಿಮೆಯ ಅಂಗವಾಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾನುವಾರ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ಗುರುವಿಗೆ ಸನ್ಮಾನ, ಪಾದಪೂಜೆ ಸ್ಮರಣೆ ಮಾಡಿ ಶಿಷ್ಯಂದಿರು ಧನ್ಯರಾದರು.

ಮಂಗಳೂರು ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ಮಾತಾ ಅಮೃತಾನಂದಮಯಿ ಮಠ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಮಾತಾ ಅಮೃತಾನಂದಮಯಿ ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ವ್ಯಕ್ತಿಯೊಳಗಿನ ದೋಷ ಪರಿಹಾರ ಮಾಡಿ ಸ್ವಯಂಪೂರ್ಣ ಮತ್ತು ಸರ್ವಾಂಗೀಣ ವ್ಯಕ್ತಿಯಾಗಿ ರೂಪಿಸುವ ದಿವ್ಯದಿನವೇ ಗುರುಪೂರ್ಣಿಮೆ ಎಂದರು.

‘ಗೊಂದಲರಹಿತ ಜೀವನ ಸಾಗಿಸಲು ಗುರು ಮತ್ತು ಗುರಿ ಇರಬೇಕು. ಶಾಂತಿ, ಸಮಾಧಾನ ಮತ್ತು ತೃಪ್ತಿಕರ ಬದುಕಿಗೆ ಇದು ಅಗತ್ಯ’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ಕಾರ್ಯಕ್ರಮದ ಅಂಗವಾಗಿ ಪಾದುಕಾ ಪೂಜೆ, ದೇವಿಪೂಜೆ, ಸರ್ವೈಶ್ವರ್ಯ ಪೂಜೆ, ಆರತಿ, ಕ್ಷೀರಾಭಿಷೇಕ ನಡೆಯಿತು. ಭಕ್ತರು ಹಾಗೂ ಸಮಾಜದ ಸ್ವಾಸ್ಥ್ಯಕ್ಕಾಗಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು. ಬೋಳೂರಿನ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಗುರು ಹೋಮ ಮತ್ತು ಮಹಾ ಮೃತ್ಯುಂಜಯ ಹೋಮ ನಡೆಯಿತು.

ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮಣ ಅಮೀನ್, ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಜೀವರಾಜ್ ಸೊರಕೆ, ಅಧ್ಯಕ್ಷ ವಸಂತಕುಮಾರ ಪೆರ್ಲ, ಉಪಾಧ್ಯಕ್ಷ ಸುರೇಶ್ ಅಮೀನ್, ಕಾರ್ಯದರ್ಶಿ ಕೆ.ಅಶೋಕ್ ಶೆಣೈ ಇದ್ದರು.

ಮಾತಾ ಅಮೃತಾನಂದಮಯಿ ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಅಮೃತಾನಂದಮಯಿ ಚಿತ್ರಕ್ಕೆ ಪೂಜೆ ಸಲ್ಲಿಸಿದರು – ಪ‍್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್

‘ಸಂಸ್ಕೃತಿ ಬೆಳೆಸಿದವರು ವೇದವ್ಯಾಸರು’

ರಾಮಕೃಷ್ಣ ಮಠದಲ್ಲಿ ಬೆಳಿಗ್ಗೆಯಿಂದ ಸಂಜೆಯ ವರೆಗೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ಶ್ರೀ ಅಲ್ಲಮಪ್ರಭು ಚಲನಚಿತ್ರ ಪ್ರದರ್ಶನ, ಶಾರದಾ ಮಹಿಳಾ ವೃಂದದಿಂದ ಭಜನೆ, ಸಂಧ್ಯಾರತಿ ಮುಂತಾದವುಗಳ ಸಂದರ್ಭದಲ್ಲಿ ಪ್ರವಚನ ನೀಡಿದ ಮಠದ ಅಧ್ಯಕ್ಷ ಜಿತಕಾಮಾನಂದಜಿ, ಭಾರತದ ಆಧ್ಯಾತ್ಮಿಕ ಸಂಸ್ಕೃತಿಗೆ ನಿಖರವಾದ ಅಡಿಗಲ್ಲು ಹಾಕಿ ಅದರ ಮೇಲೆ ಸಂಸ್ಕೃತಿ ಬೆಳೆಯಲು ಕಾರಣರಾದವರು ವೇದವ್ಯಾಸರು. ಅವರ ಜನ್ಮದಿನವೇ ಗುರುಪೂರ್ಣಿಮಾ. 

‘ಗುರುವಿನ ಗುಲಾಮನಾಗಿ, ಗುರುವಿನ ಸೇವೆ ಮಾಡಿ, ಗುರು ಹೇಳಿಕೊಟ್ಟಿದ್ದನ್ನು ನಿತ್ಯಜೀವನದಲ್ಲಿ ಪಾಲಿಸಲು ಪ್ರಯತ್ನಿಸಬೇಕು. ಸೇವೆ ಎಂದರೆ ಬರೀ ಪೂಜೆಯಲ್ಲ. ಮನಸ್ಟಿಟ್ಟು ಮಾಡಿದ್ದೆಲ್ಲವೂ ಸೇವೆಯಾಗುತ್ತದೆ. ಅದು ಸಾಧನೆಗೆ ದಾರಿಯಾಗುತ್ತದೆ. ಶ್ರದ್ಧೆಯಿಂದ ಕೆಲಸ ಮಾಡಿ ಗುರುಪರಂಪರೆಗೆ ವಿನೀತರಾಗಿ ನಡೆದುಕೊಂಡರೆ ಬದುಕು ಬೆಳಗುತ್ತದೆ’ ಎಂದು ಅವರು ಹೇಳಿದರು.

ಚಿಲಿಂಬಿಯ ಸಾಯಿಮಂದಿರದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ನಡೆಯಿತು –ಪ‍್ರಜಾವಾಣಿ ಚಿತ್ರ

ಮನೆಮನೆಯಲ್ಲಿ ಗೌರವ ಸಲ್ಲಿಕೆ

ಮಂಗಳೂರಿನ ಸಂಸ್ಕಾರ ಭಾರತೀ ಸಂಸ್ಥೆ ವತಿಯಿಂದ ಐವರು ಹಿರಿಯ ನಾಗರಿಕರನ್ನು ಅವರ ನಿವಾಸಗಳಲ್ಲಿ ಸನ್ಮಾನಿಸಲಾಯಿತು. ಗಾಯನ, ಭಜನೆ, ಸಂಕೀರ್ತನಕಾರ ಬರ್ಕೆಯ ಬಿ.ಭೋಜ ಸುವರ್ಣ, ಚಿತ್ರ ಕಲಾವಿದ ಕೆ.ಚಂದ್ರಯ್ಯ ಆಚಾರ್ಯ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಂಡಿತ್ ರಾಮರಾವ್, ನಾಟಿ ಮದ್ದು ನೀಡುವ ಗಿರಿಜಾ ಹಾಗೂ ಯಕ್ಷಗಾನದ ಹವ್ಯಾಸಿ ವೇಷಧಾರಿ, ಭಾಗವತ, ಪ್ರಸಾಧನ ಕಲಾವಿದ ಜಿ.ನಾರಾಯಣ ಹೊಳ್ಳ ಅವರನ್ನು ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.