ಮೂಡುಬಿದಿರೆ (ದಕ್ಷಿಣ ಕನ್ನಡ): ‘ಭಾರತದ ರಾಜಕಾರಣವು ಸಂವಿಧಾನದ ತತ್ವಗಳ ಅಡಿಯಲ್ಲಿ ಕೆಲಸ ಮಾಡಿದರೆ ಮುಂದಿನ ಹತ್ತು ವರ್ಷಗಳಲ್ಲಿ ಆದಿವಾಸಿಗಳು ಸಮಾಜದ ಮುಖ್ಯವಾಹಿನಿಗೆ ಬರುವಂತಾಗುತ್ತದೆ. ರಾಜಕಾರಣವನ್ನು ಬದಿಗಿರಿಸಿ ಸಂವಿಧಾನದ ತತ್ವಗಳನ್ನು ಜಾರಿ ಮಾಡುವ ಮೂಲಕ ಸಮಾನತೆಯ ಸಮಾಜದ ನಿರ್ಮಾಣ ಸಾಧ್ಯ’ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದರು.
ಆಳ್ವಾಸ್ ನುಡಿಸಿರಿ ಸಭಾಂಗಣದ ದಿ. ಜ್ಯೋತಿ ಸುಂದರ ನಾಯ್ಕ ವೇದಿಕೆಯಲ್ಲಿ ಭಾನುವಾರ ನಡೆದ ‘ಗದ್ದಿಗೆ’ ಕರಾವಳಿ ಮರಾಟಿ ಸಮಾವೇಶ 2024 ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಪಡೆಯುವ ಮೂಲಕ ಸಂಘಟಿತ ಹೋರಾಟ ಸಾಧ್ಯ. ಆ ಮೂಲಕ ನಮ್ಮ ನಿರ್ದಿಷ್ಟ ಬೇಡಿಕೆಗಳು ಈಡೇರುತ್ತವೆ. ಹೋರಾಟವು ವ್ಯಕ್ತಿತ್ವ, ನೈತಿಕತೆ ಹಾಗೂ ಚರಿತ್ರೆಯನ್ನು ನಿರ್ಮಾಣ ಮಾಡಬಲ್ಲದು ಎಂದು ಅಂಬೇಡ್ಕರ್ ನಂಬಿದ್ದರು. ನಮ್ಮ ಸಮಸ್ಯೆಗಳಿಗೆ ಪರಿಹಾರ ಸಂವಿಧಾನದಲ್ಲಿದೆ. ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಕರಾವಳಿಯ ಮರಾಟಿ ಸಮುದಾಯದ ನ್ಯಾಯಯುತ ಬೇಡಿಕೆಗಳನ್ನು ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಿ, ಮುಖ್ಯಮಂತ್ರಿ ಗಮನಕ್ಕೆ ತಂದು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಮರಾಟಿ ಸಮಾವೇಶ ಹೊಸ ಇತಿಹಾಸ ಸೃಷ್ಟಿ ಮಾಡಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ‘ಗದ್ದಿಗೆ’ ಸ್ಮರಣ ಸಂಚಿಕೆ ಬಿಡುಗಡೆಮಾಡಿ, ಮರಾಟಿ ಸಮಾಜ ಸದಾ ಹೋರಾಟ ಹಾಗೂ ಸ್ವಾಭಿಮಾನದ ಮೂಲಕ ಬದುಕಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ ಎಂದರು.
ಜಮ್ಮು ಕಾಶ್ಮೀರ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕರಾವಳಿ ಮರಾಟಿ ಸಮಾವೇಶದ ಅಧ್ಯಕ್ಷ ರಾಜೇಶ್ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ನಮ್ಮ ಸಮಾಜ ಮುಂದೆ ಬರಬೇಕಾದರೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದರು. ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿ ಬರೋಡಾ ಶಶಿಧರ ಶೆಟ್ಟಿ, ಕೇಂದ್ರ ಸರ್ಕಾರದ ನಿವೃತ್ತ ಕೃಷಿ ನಿರ್ದೇಶಕ ಬಿ.ಜಿ. ನಾಯ್ಕ, ಬೆಂಗಳೂರು ಮರಾಟಿ ಸಂಘದ ಅಧ್ಯಕ್ಷೆ ಶೋಭಾವತಿ ಎಂ.ಟಿ., ದಕ್ಷಿಣ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ವಿಶ್ವನಾಥ ನಾಯ್ಕ, ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ, ಸಮ್ಮೇಳನದ ಸಂಚಾಲಕ ಬಾಲಕೃಷ್ಣ ಸಿ.ಎಚ್., ಕೂಡ್ಲಿ ಮರಾಟಿ ಸಮಾಜದ ಅಧ್ಯಕ್ಷ ರಾಮಚಂದ್ರ ನಾಯ್ಕ್, ಕೆ.ಚಂದ್ರಶೇಖರ ನಾಯ್ಕ್, ಎಸ್.ಎಸ್.ಪರಮೇಶ್ವರ, ಸಮ್ಮೇಳನದ ಸಹಸಂಚಾಲಕ ಪ್ರಕಾಶ್ ನಾಯ್ಕ ಭಾಗವಹಿಸಿದ್ದರು. ಸಮ್ಮೇಳನದ ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಬಾರೆ ಮನವಿ ವಾಚಿಸಿದರು.
ಕೆ.ಸುಂದರ ನಾಯ್ಕ್ ಸ್ವಾಗತಿಸಿದರು. ಶಂಕರ ನಾಯ್ಕ ವಂದಿಸಿದರು. ಪ್ರಕಾಶ ನಾಯ್ಕ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.