ADVERTISEMENT

ಮಂಗಳೂರು: ಹನುಮಂತ ಕಾಮತ್‌ಗೆ 90 ದಿನ ಜೈಲು ಶಿಕ್ಷೆ

ನ್ಯಾಯಾಲಯದ ಆದೇಶ ಉಲ್ಲಂಘನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 13:26 IST
Last Updated 26 ನವೆಂಬರ್ 2024, 13:26 IST
<div class="paragraphs"><p>ನ್ಯಾಯಾಲಯ</p></div>

ನ್ಯಾಯಾಲಯ

   

ಮಂಗಳೂರು: ಪ್ರಕರಣವೊಂದರಲ್ಲಿ ನ್ಯಾಯಾಲಯ ನೀಡಿದ್ದ ಆದೇಶವನ್ನು ಉಲ್ಲಂಘನೆ ಮಾಡಿದ್ದಕ್ಕೆ ಹನುಮಂತ ಕಾಮತ್‌ ಅವರಿಗೆ ಇಲ್ಲಿನ ಜೆಎಂಎಫ್‌ಸಿ ನಾಲ್ಕನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯವು 90 ದಿನಗಳ ಕಾರಾಗೃಹ ಶಿಕ್ಷೆ ವಿಧಿಸಿ ನ.23ರಂದು ಆದೇಶ ಮಾಡಿದೆ.

ನಗರದ ವಿ.ಟಿ. ರಸ್ತೆಯಲ್ಲಿರುವ ಶ್ರೀವಿಠೋಬ ರುಕುಮಾಯಿ ದೇವರ ಭಂಡಾರದ ದಿನನಿತ್ಯದ ಆಡಳಿತಾತ್ಮಕ ವ್ಯವಹಾರದಲ್ಲಿ ಹನುಮಂತ ಕಾಮತ್ ಹಸ್ತಕ್ಷೇಪ ಉಂಟುಮಾಡಬಾರದು ಹಾಗೂ ತನ್ನನ್ನು ಟ್ರಸ್ಟಿ ಎಂದು ಪ್ರತಿಪಾದಿಸಿಕೊಳ್ಳಬಾರದು ಎಂದು ಸೂಚಿಸುವ ತಾತ್ಕಾಲಿಕ ನಿರ್ಬಂಧಕಾಜ್ಞೆ ಕೋರಿ ದೇವರ ಭಂಡಾರದ ಟ್ರಸ್ಟಿ ಎಂ.ವರದಾಯ ಪ್ರಭು ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಅದನ್ನು ಪುರಸ್ಕರಿಸಿದ್ದ ನ್ಯಾಯಾಲಯವು ಹನುಮಂತ ಕಾಮತ್ ವಿರುದ್ಧ 2015ರ ಆ. 21ರಂದು ತಾತ್ಕಾಲಿಕ ನಿರ್ಬಂಧಕಾಜ್ಞೆ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಕಾಮತ್ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕೃತವಾಗಿತ್ತು. ಕಾಮತ್ ಈ ಕುರಿತು ರಿಟ್ ಅರ್ಜಿ ಸಲ್ಲಿಸಿದರೂ ಹೈಕೋರ್ಟ್‌ ಯಾವುದೇ ತಡೆಯಾಜ್ಞೆ ನೀಡಿರಲಿಲ್ಲ. ನ್ಯಾಯಾಲಯ ವಿಧಿಸಿದ್ದ ನಿರ್ಬಂಧವನ್ನು ಉಲ್ಲಂಘಿಸಿ ಹನುಮಂತ ಕಾಮತ್, ‘ಭಂಡಾರದ ಟ್ರಸ್ಟಿ ನಾನೆ’ ಎಂಬಂತೆ ವ್ಯವಹರಿಸಿದ್ದರು. ಪತ್ರಿಕೆಯೊಂದರಲ್ಲಿ 2018ರ ಮಾ. 29ರಂದು ಈ ಕುರಿತು ಪ್ರಕಟಣೆಯನ್ನೂ ನೀಡಿದ್ದರು ಎಂಬ ಅಂಶಗಳನ್ನು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ‌.

ADVERTISEMENT

ಈ ಪ್ರಕರಣದಲ್ಲಿ ತೀರ್ಪು ಪ್ರಕಟಿಸಿರುವ ಜೆಎಂಎಫ್‌ಸಿ ನ್ಯಾಯಾಲಯದ ನಾಲ್ಕನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರರಾದ ರಾಮಲಿಂಗಪ್ಪ ಅವರು, ‘ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಪರಿಹಾರದ ಎಲ್ಲಾ ಬಾಗಿಲು ಮುಚ್ಚಿದ ನಂತರ, ಅಂತಿಮವಾಗಿ ನ್ಯಾಯಾಲಯದ ಮುಂದೆ ಅಹವಾಲು ಹೇಳಿಕೊಳ್ಳುತ್ತಾನೆ. ನ್ಯಾಯಾಲಯವು ನಿರ್ದಿಷ್ಟವಾದ ಆದೇಶ ಹೊರಡಿಸಿದಾಗ ಅದನ್ನು ಪಾಲಿಸುವ ಬದ್ಧತೆ ಮುಖ್ಯ. ಹನುಮಂತ ಕಾಮತ್ ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದಾರೆ. ಇಂತಹ ನಡವಳಿಕೆಯಿಂದ ನ್ಯಾಯಾಲಯದ ಆದೇಶಕ್ಕೆ ಬೆಲೆ ಇಲ್ಲದಂತಾಗುತ್ತದೆ. ಆದುದರಿಂದ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ತೋಳ್ಬಲವನ್ನು ಹೊಂದಿರುವ ವ್ಯಕ್ತಿಗಳು ಸಮಾಜವನ್ನು ನಿಯಂತ್ರಿಸುವ ಸಂದರ್ಭ ಸೃಷ್ಟಿಯಾಗುತ್ತದೆ. ಅಂತಹ ಕೃತ್ಯಕ್ಕೆ ಕಡಿವಾಣ ಹಾಕದೆ ಇದ್ದಲ್ಲಿ, ಸಮಾಜದ ಕಾನೂನು ವ್ಯವಸ್ಥೆ ಮತ್ತು ನೀತಿ ನಿಯಮಗಳನ್ನು ಗಾಳಿಗೆ ತೂರಿದ ವ್ಯಕ್ತಿಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಹಾಗಾಗಿ ಕಾಮತ್‌ 90 ದಿನಗಳು ಸಿವಿಲ್‌ ಬಂಧನಕ್ಕೆ ಒಳಪಡಲು ಬಾಧ್ಯಸ್ಥರಾಗಿದ್ದಾರೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಅರ್ಜಿದಾರರ ಪರವಾಗಿ ವಕೀಲ ಪಿ.ರಂಜನ್ ರಾವ್ ವಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.