ಮಂಗಳೂರು: ಶಬರಿಮಲೆಯಲ್ಲಿ ಪ್ರತಿ ರಾತ್ರಿ ಹಾಡುವ ‘ಹರಿವರಾಸನಂ’ ಎಂಬ ಹರಿಹರಾತ್ಮಜ ಅಷ್ಟಕಂನ ಹಾಡಿನ ಶತಮಾನೋತ್ಸವದ ಅಂಗವಾಗಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ (ಎಸ್‌ಎಎಸ್‌ಎಸ್) ಆಯೋಜಿಸಿರುವ ಕಾರ್ಯಕ್ರಮ ಇದೇ 11ರಂದು ಕದ್ರಿಯ ಶ್ರೀ ಮಂಜುನಾಥ ಕ್ಷೇತ್ರಾಂಗಣದಲ್ಲಿ ನಡೆಯಲಿದೆ ಎಂದು ಎಸ್‌ಎಎಸ್‌ಎಸ್ ರಾಜ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧ್ಯಕ್ಷ ಗಣೇಶ್ ಪೊದುವಾಳ್ ತಿಳಿಸಿದರು.
ಬೆಳಿಗ್ಗೆ 9ಕ್ಕೆ ಕದ್ರಿ ಮೈದಾನದಿಂದ ಗುರುಸ್ವಾಮಿಗಳು ಮತ್ತು ಭಕ್ತರ ಶೋಭಾಯಾತ್ರೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು 10.20ಕ್ಕೆ ಹರಿವರಾಸನಂ ನೃತ್ಯರೂಪಕ ನಡೆಯಲಿದೆ. 1.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಮಂಗಳೂರು ಮಾತಾ ಅಮೃತಾನಂದಮಯಿ ಮಠದ ಸಂಪೂಜ್ಯ ಸ್ವಾಮಿನಿ ಅಮ್ಮ ಅವರ ಉಪಸ್ಥಿತಿಯಲ್ಲಿ ಮಿಜೋರಾಂನ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ಉದ್ಘಾಟಿಸುವರು ಎಂದು ಪತ್ರಿಕಾಗೋಷ್ಠಿಯಲ್ಲಿ ಗಣೇಶ್ ವಿವರಿಸಿದರು.
ಎಸ್‌ಎಎಸ್‌ಎಸ್ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್ ಅಧ್ಯಕ್ಷತೆ ವಹಿಸಲಿದ್ದು ಕಲ್ಲಡ್ಕದ ಶ್ರೀರಾಮ ಶಾಲೆ ಸಂಚಾಲಕ ಪ್ರಭಾಕರ ಭಟ್ ಮತ್ತು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್ ಮುಖ್ಯ ಭಾಷಣ ಮಾಡುವರು ಎಂದು ಅವರು ತಿಳಿಸಿದರು.
ಅಯ್ಯಪ್ಪ ಮಹಿಳಾ ವಿರೋಧಿಯಲ್ಲ:
ಎಸ್‌ಎಎಸ್‌ಎಸ್ ಮಹಿಳಾ ಘಟಕದ ಉಪಾಧ್ಯಕ್ಷೆ ಕಾತ್ಯಾಯಿನಿ ರಾವ್ ಮಾತನಾಡಿ ನಿರ್ಬಂಧ ಉಲ್ಲಂಘಿಸಿ ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡಲು ಪ್ರಯತ್ನಿಸುವ ಮೂಲಕ ವಿವಾದ ಸೃಷ್ಟಿಯಾದ ನಂತರ ಎಸ್‌ಎಎಸ್‌ಎಸ್ ಮಹಿಳಾ ಘಟಕ ಆರಂಭಿಸಲಾಗಿದ್ದು ನಿಯಮದ ವ್ಯಾಪ್ತಿಗೆ ಒಳಪಡುವ ಅನೇಕ ಮಹಿಳೆಯರನ್ನು ಶಬರಿಮಲೆಗೆ ಕರೆದುಕೊಂಡು ಹೋಗಲಾಗಿದೆ. ಅಯ್ಯಪ್ಪ ಮಹಿಳಾ ವಿರೋಧಿಯಲ್ಲ ಎಂಬುದನ್ನು ಈ ಮೂಲಕ ಸಾಬೀತು ಮಾಡಲಾಗಿದೆ ಎಂದರು.
ಗುರುಸ್ವಾಮಿ, ಮೋಹನ್ ಪಡೀಲ್, ಮೋಹನ ಬರ್ಕೆ ಹಾಗೂ ಆನಂದ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.