ಮಂಗಳೂರು: ಸೌಲಭ್ಯಗಳ ಕೊರತೆಯಿಂದಾಗಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯದ ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಮಂಗಳೂರು ನಗರ ಸುತ್ತಮುತ್ತಲ 10 ಗ್ರಾಮ ಪಂಚಾಯಿತಿಗಳನ್ನು ಮೊದಲ ಹಂತದಲ್ಲಿ ಆರಿಸಲಾಗಿದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರ್ಥಿಕ ನೆರವಿನಿಂದ ಬೆಂಗಳೂರಿನ ‘ಹಸಿರು ದಳ’ ಅನುಷ್ಠಾನಗೊಳಿಸುತ್ತಿದೆ.
ಹರೇಕಳ, ಪಾವೂರು, ಬೋಳಿಯಾರ್, ಗೋಲ್ತಮಜಲು, ಬಾಳ್ತಿಲ, ತುಂಬೆ, ಪುದು, ಅಡ್ಯಾರ್, ನೀರುಮಾರ್ಗ ಮತ್ತು ಜೋಕಟ್ಟೆ ಗ್ರಾಮಗಳಲ್ಲಿ ಐದು ತಿಂಗಳಿಂದ ಯೋಜನೆಯಡಿ ಕೆಲಸಗಳು ನಡೆಯುತ್ತಿದ್ದು ಸಂಜೀವಿನಿ ಒಕ್ಕೂಟದ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸುವುದಕ್ಕೂ ನೆರವಾಗಿದೆ ಎಂಬುದು ಹಸಿರುದಳದ ಅಭಿಪ್ರಾಯ.
ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ಸಾಗಿಸಲು ವಾಹನ ಇದೆ. ನಿರ್ವಹಣಾ ಘಟಕವೂ ಇದೆ. ಆದರೆ ತ್ಯಾಜ್ಯ ಸಂಗ್ರಹಿಸುವ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ ಎಂದು ತಿಳಿದ ಹಸಿರು ದಳ ಮೂರು ವರ್ಷಗಳ ಯೋಜನೆ ಕೈಗೆತ್ತಿಕೊಂಡಿದೆ. ಕೆಲವು ಕಡೆಗಳಲ್ಲಿ ನಿರ್ವಹಣೆಗೆ ಘಟಕವೂ ಇಲ್ಲ. ಅಂಥ ಗ್ರಾಮ ಪಂಚಾಯಿತಿಗಳ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸಮೀಪದ ಗ್ರಾಮ ಪಂಚಾಯಿತಿಯ ಘಟಕವನ್ನು ಸದಸ್ಯ ಬಳಸಲಾಗುತ್ತಿದೆ.
‘ಅರಿವು ಮೂಡಿಸುವುದು, ಒಣ ಮತ್ತು ಹಸಿ ಕಸವನ್ನು ವಿಂಗಡಣೆ ಮಾಡುವುದು ಹಾಗೂ ನಿರ್ವಹಣಾ ಶುಲ್ಕ ಸಂಗ್ರಹಿಸುವುದು ಯೋಜನೆಯ ಪ್ರಮುಖ ಕಾರ್ಯ. ತ್ಯಾಜ್ಯ ಸಂಗ್ರಹಕ್ಕಾಗಿ ಗ್ರಾಮ ಪಂಚಾಯಿತಿಗಳಲ್ಲಿ ಎರಡು ವಾಹನಗಳನ್ನು ಬಳಸಲಾಗುತ್ತಿದೆ. ವಾಹನ ಚಾಲನೆ ಮಾಡಲು ಮಹಿಳೆಯರಿಗೆ ತರಬೇತಿ ನೀಡುವ ಯೋಜನೆಯೂ ಇದೆ’ ಎಂದು ಹಸಿರು ದಳದ ವ್ಯವಸ್ಥಾಪಕ ನಾಗರಾಜ್ ಅಂಚನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಆರ್ಥಿಕ ಬಲ
ತ್ಯಾಜ್ಯ ಸಂಗ್ರಹಿಸುವ ಮಹಿಳೆಯರ ವೇತನಕ್ಕೆ ಯೋಜನೆಯ ಪಾಲನ್ನೂ ಸೇರಿಸಿ ಕೊಡಲಾಗುತ್ತದೆ. ಇದರಿಂದ ಅವರು ತೃಪ್ತಿ ಗಳಿಸಿದ್ದು ಕೆಲಸದಲ್ಲಿ ಉತ್ಸಾಹ ಹೆಚ್ಚಾಗಿದೆ. ತ್ಯಾಜ್ಯವನ್ನು ವಿಂಗಡಿಸುವಾಗ ಮರುಬಳಕೆ ಸಾಧ್ಯವಿರುವ ವಸ್ತುಗಳನ್ನು ತೆಗೆದಿರಿಸಿ ಮಾರಾಟ ಮಾಡಲಾಗುತ್ತದೆ. ಇದರ ಒಂದಂಶ ಅವರಿಗೇ ಸಿಗುತ್ತದೆ. ನಿರ್ವಹಣಾ ಶುಲ್ಕ ಶೇಕಡಾ 85ರಷ್ಟು ಮನೆಗಳಿಂದ ಸಮರ್ಪಕವಾಗಿ ಸಿಗುತ್ತಿದ್ದು ಇದರಿಂದ ಸಂಜೀವಿನಿ ಒಕ್ಕೂಟದವರಿಗೆ ಹೆಚ್ಚುವರಿ ವೇತನ ಪಾವತಿಸಲು ಅನುಕೂಲ ಆಗುತ್ತಿದೆ ಎಂದು ನಾಗರಾಜ್ ಅಂಚನ್ ಹೇಳಿದರು.
‘ತಂಡದಲ್ಲಿ ಒಟ್ಟು 15 ಮಂದಿ ಇದ್ದಾರೆ. ಪ್ರತಿ ಪಂಚಾಯಿತಿಯ ಉಸ್ತುವಾರಿಯನ್ನು ಒಬ್ಬೊಬ್ಬರಿಗೆ ನೀಡಲಾಗಿದೆ. ಕೆಲವು ಕಡೆಗಳಿಗೆ ವಾಹನ ಹೋಗುವುದಿಲ್ಲ. ಅಂಥ ಪ್ರದೇಶಗಳ ಮನೆಗಳಿಂದ ತ್ಯಾಜ್ಯ ತೆಗೆದುಕೊಂಡು ಬಂದು ರಸ್ತೆಬದಿಯಲ್ಲಿ ಇರಿಸುವಂತೆ ಮನವೊಲಿಸಲಾಗುತ್ತಿದೆ’ ಎಂದು ಅವರು ಹೇಳಿದರು.
ಮುಟ್ಟಿನ ಕಪ್ ವಿತರಣೆ
ಗ್ರಾಮೀಣ ಪ್ರದೇಶಗಳ ಬಹುತೇಕ ಕಡೆಗಳಲ್ಲಿ ಬಳಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ತ್ಯಾಜ್ಯದ ರಸ್ತೆ ಬದಿ ಮತ್ತು ತೆರೆದ ಸ್ಥಳಗಳಲ್ಲಿ ಪ್ಯಾಡ್‌ಗಳು ಹೆಚ್ಚಾಗಿ ಕಂಡುಬರುತ್ತಿವೆ. ಅರಿವು ಮೂಡಿಸುವ ಕಾರ್ಯ ಕೈಗೊಂಡು ಇದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದೇವೆ. ಬಳಸಿ ಬಿಸಾಕುವ ಪ್ಯಾಡ್‌ಗಳಿಗಿಂತ ಸುರಕ್ಷಿತವಾಗಿರುವ ಮುಟ್ಟಿನ ಕಪ್‌ಗಳನ್ನು ವಿತರಿಸುವ ಯೋಜನೆಯೂ ಇದೆ ಎಂದು ನಾಗರಾಜ್ ಅಂಚನ್ ತಿಳಿಸಿದರು. ಈಗಾಗಲೇ ಎಸೆದಿರುವ ಪ್ಯಾಡ್‌ಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಗುವುದು. ಇದೇ ಸಂದರ್ಭದಲ್ಲಿ ಶಾಲಾ ಹಂತದಿಂದಲೇ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುವುದು. ಮುಟ್ಟಿನ ಕಪ್‌ಗಳನ್ನು ವಿತರಿಸಲು ಅಂಗನವಾಡಿ ಕಾರ್ಯಕರ್ತೆಯರ ನೆರವು ಪಡೆದುಕೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಕಸ ವಿಲೇವಾರಿ ಬಗ್ಗೆ ಮಾತನಾಡುವುದು ಸುಲಭ. ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡು ಕೈತೊಳೆದುಕೊಳ್ಳುವುದೂ ಸಾಧ್ಯ. ಆದರೆ ಸೌಲಭ್ಯ ಸಮರ್ಪಕ ವೇತನ ಕೊಡಬೇಕಲ್ಲವೇ? ಎಸ್‌ಬಿಐ ಸಹಯೋಗದಲ್ಲಿ ಹಸಿರುದಳ ಇದರತ್ತ ಗಮನ ಕೊಟ್ಟಿದೆ.ನಾಗರಾಜ್ ಅಂಚನ್, ಹಸಿರು ದಳದ ವ್ಯವಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.