ಬೆಳ್ತಂಗಡಿ: ‘ಬಿಜೆಪಿಯು ದೇಶದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆ. ರಾಜ್ಯಪಾಲರು ಬಿಜೆಪಿ ಏಜೆಂಟರಂತೆ ವರ್ತಿಸಿದರೆ ಕಾಂಗ್ರೆಸ್ ಕಾರ್ಯಕರ್ತರು ಯಾವ ತ್ಯಾಗಕ್ಕೂ ಸಿದ್ಧರಾಗಿರಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಬೆಳ್ತಂಗಡಿಯ ಗುರುನಾರಾಯಣ ಸಭಾ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾನುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಕಂಗೆಟ್ಟಿದೆ. ಬಡವರ ಪರವಾಗಿ ಕೆಲಸ ಮಾಡುವವರನ್ನು ಬಿಜೆಪಿಯವರು ಒಪ್ಪುವುದಿಲ್ಲ. ಹಾಗಾಗಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಬೇಕು ಎಂದು ಬಿಜೆಪಿಯವರು ಕುತಂತ್ರ ಮಾಡುತ್ತಿದ್ದಾರೆ’ ಎಂದರು.
‘ನಾಯಕರಾದವರು, ಕಾರ್ಯಕರ್ತರಾದವರು ನಾನು ಮಾಡುವ ಕೆಲಸ ನನ್ನ ಸ್ವಂತಕ್ಕಾಗಿ ಅಲ್ಲ; ಪಕ್ಷಕ್ಕಾಗಿ ಎಂಬ ಭಾವನೆ ಹೊಂದಿರಬೇಕು. ಕಷ್ಟದ ಮಧ್ಯೆಯೂ ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಎದ್ದು ನಿಲ್ಲಲು ರಾಹುಲ್ ಗಾಂಧಿಯಲ್ಲಿರುವ ಹೃದಯವಂತಿಕೆ ಕಾರಣವಾಗಿದೆ. ಎಲ್ಲರೂ ಅಂಥ ಹೃದಯವಂತಿಕೆ, ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಪಕ್ಷದಲ್ಲಿ ನಿಷ್ಠಾವಂತರಾದಾಗ ಪಕ್ಷ ಗುರುತಿಸುತ್ತದೆ’ ಎಂದರು.
‘ಗೂಂಡಾಗಿರಿ ಮಾಡಲು, ಪೊಲೀಸರು, ಅರಣ್ಯ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಲು ಶಾಸಕರಾಗುವುದಲ್ಲ. ಜಾತಿ ಧರ್ಮದ ಹೆಸರಿನಲ್ಲಿ ಸಮಾಜ ವಿಘಟನೆ ಮಾಡುವುದು ಅವರ ಕೆಲಸವಾಗಬಾರದು. ಅವರ ಕೆಲಸ ಶಾಸನ ಸಭೆಯಲ್ಲಿ ಜನರಿಗೆ ಅನುಕೂಲವಾಗುವ ಶಾಸನ ರೂಪಿಸುವುದು, ಎಲ್ಲರನ್ನೂ ಪ್ರೀತಿಸಿ ಜನಪರವಾಗಿ ನಿಲ್ಲುವುದಾಗಿದೆ’ ಎಂದು ಐವನ್ ಡಿಸೋಜ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ‘ದುಡಿಯುವ ವರ್ಗ, ಶ್ರಮಿಕ ವರ್ಗದೊಂದಿಗೆ ಗಟ್ಟಿಯಾಗಿ ಐವನ್ ಡಿಸೋಜ ನಿಂತಿದ್ದಾರೆ. ಅವರು ಕಾರ್ಯಕ್ಷಮತೆ ಮತ್ತು ಬದ್ಧತೆಯಿಂದಾಗಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆಯೇ ಹೊರತು ಸೂಟ್ ಕೇಸ್ ನೀಡಿ ಅಲ್ಲ’ ಎಂದರು.
ತಾಲ್ಲೂಕಿನಲ್ಲಿ ವ್ಯಾಪಕ ಮಳೆಯಿಂದಾಗಿ ಅಪಾರ ಹಾನಿಯಾಗಿದೆ. ಅಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ ಎಂದರು.
‘ಮಳೆ ಬಂದು ಹಾನಿಯಾದ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಕ್ಷೇತ್ರದ ಶಾಸಕ ಸಂಸದರೊಂದಿಗೆ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಳ್ತಂಗಡಿ ನೂತನ ಪ್ರವಾಸಿ ಬಂಗಲೆ ನಿರ್ಮಾಣದಲ್ಲಿ ಭ್ರಷ್ಟಾಚಾರವಾಗಿದ್ದು, ಇದೀಗ ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಕೇಳಿಬರುತ್ತಿದೆ. ಇದೀಗ ಕದ್ದು ಮುಚ್ಚಿ ತರಾತುರಿಯಲ್ಲಿ ಮುಗೆರೋಡಿ ಕನ್‍ಸ್ಟ್ರಕ್ಷನ್ ಸಂಸ್ಥೆಗೆ ಕಾಮಗಾರಿ ಆರಂಭಿಸಲು ಶಾಸಕ, ಸಂಸದ ಸೇರಿ ಚಾಲನೆ ನೀಡಿದ್ದಾರೆ’ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್‍ನ ಎಸ್.ಸಿ ಘಟಕದ ಅಧ್ಯಕ್ಷ ಶೇಖರ ಕುಕ್ಕೇಡಿ, ರಾಷ್ಟ್ರೀಯ ಸೇವಾದಳದ ಜಿಲ್ಲಾ ಘಟಕದ ಅಧ್ಯಕ್ಷ ಜೋಕಿಂ ಡಿಸೋಜ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಧರಣೇಂದ್ರ ಕುಮಾರ್, ನಮಿತಾ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಜನ್ ಜಿ.ಗೌಡ, ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾಯದರ್ಶಿ ಪ್ರವೀಣ್ ಫರ್ನಾಂಡೀಸ್, ಜಿಲ್ಲಾ ಪಂಚಾಯಿತಿ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಜಿಲ್ಲಾ ಕಾರ್ಮಿಕ ಘಟಕದ ಅಬ್ದುಲ್ ರಹಿಮಾನ್ ಪಡ್ಪು, ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ಅಬ್ದುಲ್ ಕರೀಂ ಗೇರುಕಟ್ಟೆ, ತಾಲ್ಲೂಕು ಎಸ್.ಸಿ.ಘಟಕದ ಅಧ್ಯಕ್ಷ ಓಬಯ್ಯ, ಮಹಿಳಾ ಘಟಕದ ಅಧ್ಯಕ್ಷೆ ವಂದನಾ ಭಂಡಾರಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜೈಸನ್ ಪಟ್ಟೇರಿ, ಸೇವಾದಳದ ಕೆ.ಸಿ.ಪ್ರದೀಪ್, ಮುಖಂಡರಾದ ಲೋಕೇಶ್ವರಿ ವಿನಯಚಂದ್ರ, ಪ್ರಶಾಂತ್ ವೇಗಸ್, ಎನ್ಎಸ್‌ಯುಐನ ತಾಲ್ಲೂಕು ಘಟಕದ ಅಧ್ಯಕ್ಷ ದೀವಿತ್ ದೇವಾಡಿಗ ಭಾಗವಹಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಸ್ವಾಗತಿಸಿದರು. ನಗರ ಘಟಕದ ಅಧ್ಯಕ್ಷ ಸತೀಶ್ ಕಾಶಿಪಟ್ಣ ವಂದಿಸಿದರು. ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.