ADVERTISEMENT

ಮಂಗಳೂರು | ದ್ವೇಷ ಭಾಷಣ: ಉಪನ್ಯಾಸಕನ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 20:47 IST
Last Updated 5 ಅಕ್ಟೋಬರ್ 2024, 20:47 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಮಂಗಳೂರು: ಧರ್ಮಗಳ ನಡುವೆ ದ್ವೇಷ ಹಬ್ಬಿಸುವ ಮಾತುಗಳನ್ನು ಆಡಿದ ಆರೋಪದ ಮೇಲೆ ತೊಕ್ಕೊಟ್ಟು ಭಟ್ನಗರದ ನಿವಾಸಿಯಾಗಿರುವ ಖಾಸಗಿ ಕಾಲೇಜಿನ ಉಪನ್ಯಾಸಕ ಅರುಣ್‌ ಉಳ್ಳಾಲ್‌ ಎಂಬುವರ ವಿರುದ್ಧ ಇಲ್ಲಿನ ಸೆನ್‌ ಅಪರಾಧ ಠಾಣೆಯ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. 

ಉಳ್ಳಾಲ ತಾಲ್ಲೂಕಿನ ಕಿನ್ಯ ಬೆಳರಿಂಗೆಯ ಕೇಶವ ಶಿಶುಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ನವದಂಪತಿ ಸಮಾವೇಶದಲ್ಲಿ ಭಾಗವಹಿಸಿದ್ದ ಅರುಣ್‌ ಉಳ್ಳಾಲ್‌ ನವವಿವಾಹಿತರಾಗಿ ಅನಿಸಿಕೆ ವ್ಯಕ್ತಪಡಿಸಿದ್ದರು. ಇದರ ವಿಡಿಯೊ ತುಣು‌ಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

‘ಅರುಣ್ ಉಳ್ಳಾಲ್‌ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 196 (ಧರ್ಮಗಳ ನಡುವೆ ದ್ವೇಷ ಹರಡುವುದು) ಮತ್ತು ಸೆಕ್ಷನ್‌ 351ರ ಅಡಿ (ಆತಂಕ ಸೃಷ್ಟಿಸುವುದು)  ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ನಗರ ಪೊಲಿಸ್ ಕಮಿಷನರ್‌ ಅನುಪಮ್ ಅಗರ್ವಾಲ್‌ ತಿಳಿಸಿದ್ದಾರೆ.

ADVERTISEMENT

‘ನಾವು ಒಂದು ಬದ್ಧತೆ ಇಟ್ಟುಕೊಳ್ಳಬೇಕು. ನಾವು ಅಥವಾ ನಮ್ಮ ಮನೆಯವರ ಮದುವೆ ಸಮಾರಂಭವನ್ನು ಹಿಂದೂ ಸಮುದಾಯದವರ ಸಭಾಂಗಣದಲ್ಲೇ ಏರ್ಪಡಿಸಬೇಕು. ಅನ್ಯ ಸಮುದಾಯದವರು ಕಟ್ಟಿದ ಸಭಾಂಗಣದಲ್ಲಿ ಅವರ ಸಮುದಾಯದವರು ಮದುವೆಯ ಆಗುವುದೇ ಕಡಿಮೆ. ನಮ್ಮದೇ ಆದಾಯ ಅವರಿಗೆ. ನಾವು ಖರೀದಿಸುವ ವಸ್ತುಗಳ ಒಂದಷ್ಟು ಮೊತ್ತ ವಿದೇಶಕ್ಕೆ ಹೋಗುತ್ತದೆ. ಆದು ಯಾರಿಗೋ ಸಲ್ಲುತ್ತದೆ’ ಎಂದು ಅರುಣ್‌ ಉಳ್ಳಾಲ್‌ ಹೇಳಿರುವುದು ಆ ವಿಡಿಯೊ ತುಣುಕಿನಲ್ಲಿದೆ.

‘ಒಂದು ಅಂಶ ಗಮನಿಸಿ; ನಗರದಲ್ಲಿರುವ ಹಿಂದೂಗಳ ಕಾಲೇಜುಗಳಲ್ಲಿ ವರ್ಷ ವರ್ಷವೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನಗರದಲ್ಲಿ ಅನ್ಯ ಮತೀಯರು ನಡೆಸುತ್ತಿರುವ ಕಾಲೇಜೊಂದರಲ್ಲಿ ವಾಣಿಜ್ಯ ವಿಭಾಗದಲ್ಲಿ 11 ಬ್ಯಾಚ್‌ಗಳಿವೆ.  ನಮ್ಮವರ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಒಂದು ತರಗತಿಗೂ ವಿದ್ಯಾರ್ಥಿಗಳ ಕೊರತೆ ಇದೆ. ಮಕ್ಕಳನ್ನು ಹಿಂದೂ ಶಾಲೆಗೇ ಸೇರಿಸಬೇಕು. ಇಂತಹ ಆಲೋಚನೆ ಬೆಳೆಸಿಕೊಳ್ಳಬೇಕು’ ಎಂಬ ಮಾತುಗಳೂ ವಿಡಿಯೊದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.