ಮಂಗಳೂರು: ‘ನಗರದ ಓಲ್ಡ್‌ಕೆಂಟ್ ರಸ್ತೆಯಲ್ಲಿ ಸ್ಕೂಟರ್ ತಡೆದು ₹16.20 ಲಕ್ಷ ದೋಚಿದ್ದಾರೆ’ ಎಂಬ ದೂರಿನ ಪ್ರಕರಣವನ್ನು ಭೇದಿಸಿರುವ ಮಂಗಳೂರು ನಗರ ಪೊಲೀಸರು, ಇದು ಹವಾಲಾ ಹಣ ಸಾಗಾಟಕಾರರು ಏಕಾಏಕಿ ಹಣ ಮಾಡಲು ನಡೆಸಿದ ‘ನಕಲಿ ದರೋಡೆ’ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲದ ಮೀನು ವ್ಯಾಪಾರಿ ಮಹಮ್ಮದ್ ರಿಫಾತ್ ಅಲಿ ಯಾನೆ ರಾಶಿತ್, ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿದ್ದ ಫಜಲ್ ನಗರದ ನಿವಾಸಿ ಅಶ್ಫಕ್ ಯಾನೆ ಜುಟ್ಟು, ಮರಳು ವ್ಯಾಪಾರಿ ಬಿ.ಸಿ.ರೋಡಿನ ಜಾಫರ್ ಸಾದಿಕ್, ವ್ಯಾಪಾರಿ ಮುಹಮ್ಮದ್ ಇಸ್ಮಾಯಿಲ್ ಮತ್ತು ಗಲ್ಫ್‌ನಿಂದ ವಾಪಸ್ ಬಂದಿದ್ದ ಕೆ.ಎಚ್. ಮಯ್ಯದಿ ಅವರನ್ನು ಬಂಧಿಸಲಾಗಿದೆ.
‘ಇವರು ಹವಾಲಾ ಏಜೆಂಟ್‌ಗಳೂ ಆಗಿದ್ದು, ಬಂಧಿತರಿಂದ ₹95 ಸಾವಿರ ನಗದು, ಬೈಕ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಘಟನೆ:
‘ಅಕ್ಕನ ಮಗಳ ಮದುವೆ ಹಾಗೂ ಬಟ್ಟೆ ಬರೆ ಖರೀದಿಸಲು ಫೆ.22ರಂದು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಮೂವರು ದಾರಿಯಲ್ಲಿ ಅಡ್ಡಗಟ್ಟಿ ನನ್ನಲ್ಲಿದ್ದ ₹16.20 ಲಕ್ಷ ಹಣ ದೋಚಿ ಪರಾರಿ ಆಗಿದ್ದಾರೆ’ ಎಂದು ಸೂರಲ್ಪಾಡಿಯ ಅಬ್ದುಲ್ ಸಲಾಂ ಎಂಬಾತ ಮಾ.4ರಂದು ಪೊಲೀಸರಿಗೆ ದೂರು ನೀಡಿದ್ದನು.
ತನಿಖೆ ಆರಂಭಿಸಿದ ಪೊಲೀಸರಿಗೆ ತಂಡವೊಂದು ಕೃತ್ಯ ಎಸಗಿರುವುದು ಸಿಸಿಟಿವಿ ಫೂಟೇಜ್‌ನಲ್ಲಿ ದೃಢಪಟ್ಟಿದೆ. ಆರೋಪಿಗಳ ಜಾಡು ಹಿಡಿದಾಗ ಹವಾಲಾ ವರ್ಗಾವಣೆಗಾಗಿ ವ್ಯಕ್ತಿಯೊಬ್ಬರಿಂದ ಹಣ ಪಡೆದಿರುವುದು ಮಾಹಿತಿ ದೊರೆತಿದೆ. ಅಲ್ಲದೇ, ದೂರುದಾರ ಅಬ್ದುಲ್ ಸಲಾಂ ಸೇರಿದಂತೆ ಹಲವರು ಹವಾಲಾ ಹಣ ವರ್ಗಾವಣೆ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ₹8 ಸಾವಿರ ವೇತನ ಹಾಗೂ ಕಮಿಷನ್ ಪಡೆಯುತ್ತಿರುವುದು ತಿಳಿದು ಬಂದಿದೆ.
ದರೋಡೆ ನಾಟಕ:
ಆದರೆ, ಏಕಾಏಕಿ ಹಣ ಮಾಡುವ ಉದ್ದೇಶದಿಂದ ಆರೋಪಿ ಇಸ್ಮಾಯಿಲ್ ‘ನಕಲಿ ದರೋಡೆ’ಯ ನಾಟಕವನ್ನು ರೂಪಿಸಿದ್ದಾನೆ. ಅದರಂತೆ ದೂರುದಾರ ಹಾಗೂ ಇತರ ನಾಲ್ವರು ಏಜಂಟ್‌ಗಳು ಸೇರಿಕೊಂಡು ಹವಾಲಾದ ಹಣ ಸಾಗಾಟದ ಸಂದರ್ಭದಲ್ಲಿ ದರೋಡೆ ನಾಟಕ ಮಾಡಿದ್ದಾರೆ.
ಆದರೆ, ₹16.20 ಲಕ್ಷ ಹಣ ಕೊಟ್ಟಿದ್ದ ಹಾಗೂ ಪಡೆಯಬೇಕಿದ್ದವರು ಒತ್ತಡ ಹೇರಿದಾಗ ಹಣಕ್ಕೆ ನಕಲಿ ದಾಖಲೆ ಸೃಷ್ಟಿಸಲು ಯತ್ನಿಸಿದ್ದು, ದೂರು ನೀಡಿದ್ದಾರೆ.
ಈ ತಂಡವು ಕೋಟ್ಯಂತರ ರೂಪಾಯಿ ಹವಾಲಾ ಹಣ ವರ್ಗಾವಣೆ ಮಾಡಿರುವ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಯಲಿದೆ. ಇವರು ಹವಾಲಾ ಹಣ ಸಾಗಾಟದ ಸಂದರ್ಭ ಮೊಬೈಲ್ ಬಳಸುತ್ತಿರಲಿಲ್ಲ. ದೂರುದಾರ ಅಬ್ದುಲ್ ಸಲಾಂ ತನ್ನ ಕುಟುಂಬ ಸಮೇತ ಪರಾರಿಯಾಗಿದ್ದಾನೆ. ದಂಧೆಯಲ್ಲಿದ್ದ ಕೆಲವರು ವಿದೇಶಕ್ಕೆ ತೆರಳಿರುವ ಶಂಕೆ ಇದೆ. ತನಿಖೆ ಮುಂದುವರಿಯಲಿದೆ ಎಂದು ಕಮಿಷನರ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ವಿನಯ್ ಗಾಂವ್ಕರ್, ಹರಿರಾಂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.