ADVERTISEMENT

ಕಾಲೇಜಿನ ವೇಳಾಪಟ್ಟಿ ಬದಲು– ಸುತ್ತೋಲೆ

ಬಿಸಿಲಿನ ತಾಪದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ– ಪೋಷಕರಿಂದ ದೂರು

​ಪ್ರಜಾವಾಣಿ ವಾರ್ತೆ
Published 8 ಮೇ 2024, 5:13 IST
Last Updated 8 ಮೇ 2024, 5:13 IST
.
.   

ಮಂಗಳೂರು: ವಿದ್ಯಾರ್ಥಿಗಳು ತೀವ್ರ ಬಿಸಿಲಿನಿಂದ ಸಮಸ್ಯೆ ಎದುರಿಸುವುದನ್ನು ತಪ್ಪಿಸಲು ಕಾಲೇಜಿನ ವೇಳಾ ಪಟ್ಟಿಯಲ್ಲಿ ಬದಲಾವಣೆ ಮಾಡುವಂತೆ  ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಅನುದಾನಿತ ಪದವಿ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ.

‘ಕಾಲೇಜುಗಳ ಪ್ರಾಂಶುಪಾಲರ ಜೊತೆ ಸೋಮವಾರ ವಿಡಿಯೊ ಸಂವಾದ ನಡೆಸಿದ್ದು, ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಒಂದೇ ತೆರನಾದ ವೇಳಾಪಟ್ಟಿಯನ್ನು ನಿಗದಿಪಡಿಸಿಲ್ಲ. ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಕಾಲೇಜುಗಳು  ಕಾರ್ಯನಿರ್ವಹಿಸುವ ಅವಧಿ ಬೇಗ ಕೊನೆಗೊಳ್ಳಬೇಕು ಎಂದು ಸೂಚಿಸಿದ್ದೇವೆ. ಈ ಕುರಿತ ಸುತ್ತೋಲೆಯನ್ನು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ 37 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಹಾಗೂ 39 ಅನುದಾನಿತ ಕಾಲೇಜುಗಳಿಗೆ ಕಳುಹಿಸಿದ್ದೇವೆ’ ಎಂದು ಕಾಲೇಜು ಶಿಕ್ಷಣ ನಿರ್ದೇಶನಾಲಯದ ಮಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ರಾಮೇಗೌಡ ಪ್ರತಿಕ್ರಿಯಿಸಿದ್ದಾರೆ.

ಬೇಸಿಗೆಯಲ್ಲಿ ವಾತಾವರಣದ ಸರಾಸರಿ ಉಷ್ಣಾಂಶವು ಸರಾಸರಿ 5 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಹೆಚ್ಚಳವಾಗಿರುವುದರಿಂದ ಕಾಲೇಜು ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ಕಾಲೇಜುಗಳಲ್ಲಿ ಮೂಲಸೌಕರ್ಯ ಕೊರತೆಯೂ ಇದ್ದು, ಬಿಸಿಲಿನ ಆಘಾತವನ್ನು ಸಹಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಅವರ ಪೋಷಕರು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರಿಗೆ ಈಚೆಗೆ ದೂರು ನೀಡಿದ್ದರು.

ADVERTISEMENT

‘ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಕೆಲವು ಕಾಲೇಜುಗಳು ವೇಳಾಪಟ್ಟಿ ಬದಲಾವಣೆಗೆ ಅವಕಾಶ ನೀಡುವಂತೆ ಕೋರಿದ್ದವು’ ಎಂದು ಜಂಟಿ ನಿರ್ದೇಶಕ ತಿಳಿಸಿದರು. 

‘ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾವು ಕಾಲೇಜಿನ ವೇಳಾಪಟ್ಟಿಯನ್ನು ಮಾರ್ಪಾಡು ಮಾಡುತ್ತಿಲ್ಲ. ಕೆಲವು ವಿದ್ಯಾರ್ಥಿಗಳು ಪುತ್ತೂರು, ನೆರೆಯ ರಾಜ್ಯವಾದ ಕೇರಳದ ಕಾಸರಗೋಡಿನಿಂದ ಬರುತ್ತಾರೆ. ಅವರಿಗೆ ಅನನುಕೂಲ ಆಗಬಾರದು ಎಂಬ ಕಾರಣಕ್ಕೆ ಬೆಳಿಗ್ಗೆ 9.15ರಿಂದಲೇ ತರಗತಿಗಳನ್ನು ಆರಂಭಿಸಲಿದ್ದೇವೆ’ ಎಂದು ‘ಡಾ.ಪಿ.ದಯಾನಂದ ಪೈ– ಪಿ.ಸತೀಶ ಪೈ  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಯಕರ ಭಂಡಾರಿ ಎಂ. ತಿಳಿಸಿದರು.

‘ಶೇ 50ರಿಂದ ಶೇ 60ರಷ್ಟು ವಿದ್ಯಾರ್ಥಿಗಳು ಹೊಸ ರಾಷ್ಟ್ರಿಯ ಶಿಕ್ಷಣ ನೀತಿ ಪಠ್ಯಕ್ರಮದಲ್ಲಿ ಕಲಿಯುತ್ತಿದ್ದು, ಅವರ ತರಗತಿಗಳು ಮಧ್ಯಾಹ್ನ 2 ಗಂಟೆಗೆ ಕೊನೆಗೊಳ್ಳುತ್ತದೆ’ ಎಂದು ಅವರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.