ಕಾಸರಗೋಡು: ಬಿರುಸಿನ ಗಾಳಿಮಳೆಗೆ ಪಡನ್ನಕಾಡು ಮರಕ್ಕೋಪ್ ಕರಾವಳಿಯ ಬಾಬುರಾಜ್ ಎಂಬುವರ ಕೋಳಿಫಾರಂ ಕುಸಿದು ಬಿದ್ದಿದೆ. ಅವಘಡದಲ್ಲಿ ಸುಮಾರು 150 ಮಾಂಸದ ಕೋಳಿಗಳು ಮೃತಪಟ್ಟಿವೆ. ಸುಮಾರು 500 ಕೋಳಿಗಳು ಇಲ್ಲಿದ್ದವು. ಸುಮಾರು ₹ 4 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಶಿಕ್ಷಕಿ ಆತ್ಮಹತ್ಯೆ: ಪತಿ, ಅತ್ತೆ ದೋಷಿಗಳು
ಕಾಸರಗೋಡು: ಮುನ್ನಾಡ್ ನಿವಾಸಿ, ವಿದ್ಯಾಲಯವೊಂದರ ದೈಹಿಕ ಶಿಕ್ಷಣ ಶಿಕ್ಷಕಿ ಪ್ರೀತಿ ಎಂಬುವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪತಿ, ವೆಸ್ಟ್ ಎಳೆರಿ ಮಾಂಗಾಡ್ ಪೋರಾಕ್ಕರ ನಿವಾಸಿ, ರಾಕೇಶ್ ಕೃಷ್ಣ (38) ಮತ್ತು ಅತ್ತೆ ಶ್ರೀಲತಾ (59) ಎಂಬುವರು ದೋಷಿಗಳೆಂದು ಜಿಲ್ಲಾ ಹೆಚ್ಚುವರಿ ಸೆಷನ್ಸ್ (ಪ್ರಥಮ) ನ್ಯಾಯಾಲಯ ತೀರ್ಪು ನೀಡಿದೆ.
ಆರೋಪಿಗಳಿಗೆ ಸೆ.18ರಂದು ಶಿಕ್ಷೆ ಘೋಷಿಸುವುದಾಗಿ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. 2017ರ ಆ.18ರಂದು ಪ್ರೀತಿ ಅವರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಮತ್ತು ಅತ್ತೆ ನಡೆಸುತ್ತಿದ್ದ ದೌರ್ಜನ್ಯದಿಂದ ಬೇಸರಗೊಂಡಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಬೇಡಗಂ ಪೊಲೀಸರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದರು. ಪ್ರೀತಿ ಅವರು ರಾಷ್ಟ್ರೀಯ ಮಟ್ಟದ ಕಬಡ್ಡಿ ಪಟುವಾಗಿದ್ದರು.
ಕಾರ್ಮಿಕ ಸಾವು
ಕಾಸರಗೋಡು: ಬೇಕಲದ ಮೀತ್ತಲ್ ಮೌವ್ವಲ್ ಎಂಬಲ್ಲಿ ಲಾರಿಯಿಂದ ಇಳಿಸುತ್ತಿದ್ದ ಮಾರ್ಬಲ್ ಹಲಗೆ ಮೈಮೇಲೆ ಬಿದ್ದು ಕಾರ್ಮಿಕ, ಮೂಲತಃ ಮಧ್ಯಪ್ರದೇಶ ನಿವಾಸಿ ಜಮೀನ್ ಲಾಲ್ (42) ಮೃತಪಟ್ಟಿದ್ದಾರೆ.
ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದರೂ, ಅಷ್ಟರಲ್ಲಿ ಮೃತಪಟ್ಟಿದ್ದರು. ಮತ್ತೊಬ್ಬ ಕಾರ್ಮಿಕ ಹಲಗೆಯಡಿ ಸಿಲುಕಿದ್ದರೂ, ಅವರು ಪಾರಾಗಿದ್ದಾರೆ. ಬೇಕಲ ಪೊಲೀಸರು ಮಹಜರು ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.