ಸುಬ್ರಹ್ಮಣ್ಯ: ಕುಮಾರಪರ್ವತ ಸೇರಿದಂತೆ ಘಟ್ಟ ಪ್ರದೇಶದಲ್ಲಿ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿಯಲ್ಲಿ ಪ್ರವಾಹ ಮತ್ತಷ್ಟು ಹೆಚ್ಚಿದೆ. ಕುಮಾರಧಾರದ ಉಪನದಿ ದರ್ಪಣತೀರ್ಥವು ತುಂಬಿ ಹರಿದು ದರ್ಪಣತೀರ್ಥ ಸೇತುವೆ ಮುಳುಗಡೆಯಾಗಿದೆ. ಸೇತುವೆಯಿಂದ ಸುಮಾರು 200 ಮೀ ದೂರದ ತಿರುಗಣೆಗುಂಡಿವರೆಗೆ ನದಿ ನೀರು ರಸ್ತೆಯನ್ನು ಆಕ್ರಮಿಸಿದೆ.
ಸಂಚಾರ ಸ್ಥಗಿತ: ದರ್ಪಣತೀರ್ಥ ಸೇತುವೆ ಮತ್ತು ಸುಬ್ರಹ್ಮಣ್ಯ-ಮಂಜೇಶ್ವರ ರಸ್ತೆ ಜಲಾವೃತವಾದ ಕಾರಣ ವಾಹನ ಸಂಚಾರ ಸ್ಥಗಿತವಾಯಿತು. ಇದರಿಂದಾಗಿ ಜನ ಸುತ್ತು ಬಳಸಿ ಕ್ಷೇತ್ರಕ್ಕೆ ಬರುವಂತಾಗಿತ್ತು. ದೋಣಿಮಕ್ಕಿ ಸಂಪರ್ಕಿಸುವ ರಸ್ತೆಯೂ ಬಂದ್ ಆಗಿದ್ದರಿಂದ ಸ್ಥಳೀಯರು ಪರದಾಡಿದರು.
ಸುಬ್ರಹ್ಮಣ್ಯದ ಸ್ನಾನಘಟ್ಟವು ಸಂಪೂರ್ಣವಾಗಿ ಮುಳುಗಡೆಯಾಗಿದೆ. ಲಗೇಜ್ ಕೊಠಡಿ ಇರುವ ಕಟ್ಟಡದ ವರೆಗೂ ನೀರು ವ್ಯಾಪಿಸಿದೆ. ಶೌಚಾಲಯ, ಸ್ನಾನಘಟ್ಟದ ಸಮೀಪ ಇರುವ ದೇವರ ಜಳಕದ ಕಟ್ಟೆ, ಬಟ್ಟೆ ಬದಲಾಯಿಸುವ ಕೊಠಡಿಗಳೂ ಮುಳುಗಡೆಯಾಗಿದ್ದವು. ಸಮೀಪವಿದ್ದ ಅಂಗಡಿಗಳಿಗೂ ನೀರು ನುಗ್ಗಿತ್ತು.
ಸೋಮವಾರ ಸಂಜೆ ವೇಳೆಗೆ ಪ್ರವಾಹ ಮತ್ತಷ್ಟು ಹೆಚ್ಚಾಗಿದೆ. ನದಿ ನೀರು ಕುಮಾರಧಾರ ದ್ವಾರದ ವರೆಗೆ ವ್ಯಾಪಿಸಿತ್ತು. ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಸುಮಾರು 5 ಅಡಿ ನೀರು ಸಂಗ್ರಹವಾಗಿತ್ತು.
ಪರ್ವತಮುಖಿಯ ಕೃಷಿಕ ರಾಮಣ್ಣ ಅವರ ಭತ್ತದ ಗದ್ದೆ ಸೋಮವಾರ ಸಂಪೂರ್ಣ ಮುಳುಗಡೆಯಾಗಿತ್ತು. ಇತ್ತೀಚೆಗೆ ನಾಟಿ ಮಾಡಿದ್ದ ಭತ್ತದ ಸಸಿಗಳು ನೀರಿನಲ್ಲಿ ಮುಳುಗಿದ್ದವು. ಕುಮಾರಧಾರದ ಕಿಟ್ಟಣ್ಣ ರೈ, ಕೃಷಿಕ ದಿನಕರ ಹೊಸೋಳಿಕೆ ಅವರ ತೋಟಕ್ಕೂ ನೀರು ನುಗ್ಗಿದೆ. ಅಡಿಕೆ ಮರಗಳು, ಬಾಳೆಗಿಡಗಳು ಕೊಚ್ಚಿಕೊಂಡು ಹೋಗಿದೆ. ತೋಟಕ್ಕೆ ಹಾಕಿದ ಗೊಬ್ಬರ, ಸ್ಪಿಂಕ್ಲರ್ ಪೈಪ್‌ಗಳಿಗೂ ಹಾನಿಯಾಗಿದೆ.
ಕುಮಾರಧಾರ ನದಿಯಲ್ಲಿ ಪ್ರವಾಹದ ಬಂದಿರುವುದರಿಂದ ಸುಬ್ರಹ್ಮಣ್ಯ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಸುಬ್ರಹ್ಮಣ್ಯ ಪೋಲೀಸರು ಬಂದೋಬಸ್ತ್ ಮಾಡಿದ್ದರು. ಗೃಹರಕ್ಷಕ ದಳ ಮತ್ತು ಕುಕ್ಕೆ ದೇವಳದ ಭದ್ರತಾ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕ್ಕೆ ಕುಮಾರಧಾರದಲ್ಲಿ ನಿಯೋಜಿಸಲಾಗಿದೆ. ಎಸ್‌ಡಿಆರ್‌ಎಫ್ ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಕುಮಾರಧಾರದಲ್ಲಿ ಮತ್ತು ತಿರುಗಣೆಗುಂಡಿ ಪ್ರದೇಶದಲ್ಲಿ ಬ್ಯಾರಿಕೇಡ್ ಇರಿಸಿ ಸಾರ್ವಜನಿಕರನ್ನು, ವಾಹನಗಳನ್ನು ಸ್ನಾನಘಟ್ಟದ ಕಡೆ ಮತ್ತು ಸುಬ್ರಹ್ಮಣ್ಯ ಪುತ್ತೂರು ರಸ್ತೆಯತ್ತ ತೆರಳದಂತೆ ನಿಗಾವಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.