ADVERTISEMENT

ಮಳೆ ಅಬ್ಬರ: ಸುಳ್ಯದ ಕಾಳಜಿ ಕೇಂದ್ರದಲ್ಲಿ 58 ಮಂದಿಗೆ ಆಶ್ರಯ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 4:18 IST
Last Updated 5 ಆಗಸ್ಟ್ 2022, 4:18 IST
ಸಂಪಾಜೆ ಸಜ್ಜನ ಪ್ರತಿಷ್ಠಾನದ ಕಾಳಜಿ ಕೇಂದ್ರದಲ್ಲಿರುವವರು.
ಸಂಪಾಜೆ ಸಜ್ಜನ ಪ್ರತಿಷ್ಠಾನದ ಕಾಳಜಿ ಕೇಂದ್ರದಲ್ಲಿರುವವರು.   

ಸುಳ್ಯ: ನಿರಂತರ ಮಳೆಯಿಂದ ಗ್ರಾಮಾಂತರ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಅಪಾಯದಲ್ಲಿರುವ ಮನೆಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸುಳ್ಯ ತಾಲ್ಲೂಕು ಹಾಗೂ ಕಡಬ ತಾಲ್ಲೂಕುಗಳ ಕಾಳಜಿ ಕೇಂದ್ರಗಳಲ್ಲಿ 58 ಮಂದಿ ಆಶ್ರಯ ಪಡೆದಿದ್ದಾರೆ.

ಕಲ್ಮಕಾರು ಸಕಾ೯ರಿ ಪ್ರಾಥಮಿಕ ಶಾಲೆಯಲ್ಲಿ 21 ಮಂದಿ, ಸಂಪಾಜೆಯ ಸಜ್ಜನ ಪ್ರತಿಷ್ಠಾನದಲ್ಲಿ 12 ಮಂದಿ, ಸುಬ್ರಹ್ಮಣ್ಯದ ಅನಘ ವಸತಿಗೃಹದಲ್ಲಿ 13 ಮಂದಿ, ಯೇನೆಕಲ್ಲು ಸಕಾ೯ರಿ ಪ್ರಾಥಮಿಕ ಶಾಲೆಯಲ್ಲಿ 6 ಮಂದಿ ಇದ್ದಾರೆ ಎಂದು ತಾಲ್ಲೂಕು ಆಡಳಿತ ಮಾಹಿತಿ ನೀಡಿದೆ.

ADVERTISEMENT

ಅಪಾರ ಹಾನಿ: ನಿರಂತರ ಮಳೆಯಿಂದಾಗಿ ಮಡಪ್ಪಾಡಿಯಲ್ಲಿ ಅಪಾರ ಹಾನಿ ಸಂಭವಿಸಿದೆ.

ಮಡಪ್ಪಾಡಿಯ ಗೋಳಿಯಡಿ ಎಂಬಲ್ಲಿ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದು‌ ಬ್ಲಾಕ್ ಆಗಿ, ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಮಡಪ್ಪಾಡಿಯಿಂದ ಶೀರಡ್ಕ, ದೇರುಮಜಲು ಸಂಪರ್ಕಿಸುವ ರಸ್ತೆಯಲ್ಲಿ ಅಂಬೆಕಲ್ಲು ಎಂಬಲ್ಲಿ‌ ಬಿರುಕು ಕಾಣಿಸಿಕೊಂಡಿದ್ದು, ಆತಂಕದ ಪರಿಸ್ಥಿತಿ ಎದುರಾಗಿದೆ.

ಹಾಡಿಕಲ್ಲು ಕಡೆಗಳಲ್ಲಿ ಸೇತುವೆ ಮಣ್ಣು ಕೊಚ್ಚಿ ಹೋಗಿದ್ದು, ಪೇರಪ್ಪ ಮಲೆ ಎಂಬುವರ ಅಂಗಳ ಕುಸಿದಿದೆ. ಪೂಂಬಾಡಿಯನ್ನು ಸಂಪರ್ಕಿಸುವ ಶೆಟ್ಟಿಮಜಲು ಸೇತುವೆ ಮುಳುಗಡೆಯಾಗಿ ತೋಟಗಳಿಗೂ ನೀರು ನುಗ್ಗಿತ್ತು. ಜಾಲುಮನೆ ಎಂಬಲ್ಲಿಯೂ ಸೇತುವೆಯ ಮಣ್ಣು ಕೊಚ್ಚಿ ಹೋಗಿದೆ. ಗುಡ್ಡದ ಬಳಿ ಅಪಾಯದಲ್ಲಿ ಇರುವ 2 ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಗಂಗಯ್ಯ ಪೂಂಬಾಡಿ ಎಂಬುವರ ಮನೆಯ ಬದಿ ಗುಡ್ಡ ಕುಸಿತಗೊಂಡಿದ್ದು, ಮನೆಗೆ ಭಾಗಶಃ ಹಾನಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಮತ್ತೆ ಮಳೆ ಚುರುಕುಗೊಂಡಿದೆ. ಗುರುವಾರ ರಾತ್ರಿಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.