ADVERTISEMENT

ವಿಟ್ಲ ಹೆದ್ದಾರಿ ಅಭಿವೃದ್ಧಿಗೆ ₹ 50 ಕೋಟಿ ಬಿಡುಗಡೆಗೆ ಆಗ್ರಹ

ವಿಟ್ಲ ರಸ್ತೆ ವಿಸ್ತರಣೆಗೆ ಆಗ್ರಹಿಸಿ ಪ್ರತಿಭಟನೆ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 15:35 IST
Last Updated 28 ನವೆಂಬರ್ 2023, 15:35 IST
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ವಿಟ್ಲ ರಸ್ತೆ ವಿಸ್ತರಣೆಗೆ ಆಗ್ರಹಿಸಿ ನಡೆದ ಪ್ರತಿಭಟನೆ ಬಳಿಕ ಮನವಿ ಸಲ್ಲಿಸಲಾಯಿತು
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ವಿಟ್ಲ ರಸ್ತೆ ವಿಸ್ತರಣೆಗೆ ಆಗ್ರಹಿಸಿ ನಡೆದ ಪ್ರತಿಭಟನೆ ಬಳಿಕ ಮನವಿ ಸಲ್ಲಿಸಲಾಯಿತು   

ವಿಟ್ಲ: ಸ್ವಾತಂತ್ರ್ಯ ಪೂರ್ವದಿಂದಲೇ ಉಪಯೋಗದಲ್ಲಿದ್ದ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ಖಾಸಗಿ ರಸ್ತೆ ಎಂದು ಅಭಿವೃದ್ಧಿಯನ್ನು ತಡೆಯುತ್ತಿರುವವರು ಜಾಗವನ್ನು ಬಿಟ್ಟು ರಸ್ತೆ ವಿಸ್ತರಣೆಗೆ ನೆರವಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಮುರುವ ಮಹಾಬಲ ಭಟ್ ಹೇಳಿದರು.

ರಾಜ್ಯ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ವಿಟ್ಲ ರಸ್ತೆ ವಿಸ್ತರಣೆಗೆ ಆಗ್ರಹಿಸಿ ವಿಟ್ಲ ನಿರೀಕ್ಷಣಾ ಮಂದಿರದಿಂದ ವಿಟ್ಲ ನಾಡಕಚೇರಿ ವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಅವರು ಮಾತನಾಡಿದರು.

ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ವಿಧಾನ ಸಭಾ ಕ್ಷೇತ್ರವನ್ನು ವಿಟ್ಲ ಕಳೆದುಕೊಂಡ ಬಳಿಕ ಪುತ್ತೂರು, ಬಂಟ್ವಾಳ, ಉಳ್ಳಾಲ ಭಾಗಕ್ಕೆ ಜನರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳೇ ನೇರ ಕಾರಣ. ವಿಟ್ಲದ ರಾಜಕೀಯ ವ್ಯವಸ್ಥೆ ರಸ್ತೆಯನ್ನು ಮೆಲ್ಕಾರ್‌ನಿಂದ ತಿರುಗಿಸಿ ಕಾಂಞಂಗಾಡಿಗೆ ತೆಗೆದುಕೊಂಡು ಹೋಗುವ ಕೆಲಸಕ್ಕೆ ಕೈಹಾಕಿದ್ದಾರೆ. ವಿಟ್ಲ ಪೇಟೆಯನ್ನು ವಿಸ್ತರಣೆ ಮಾಡಿ ಹೆದ್ದಾರಿಯನ್ನು ಈ ಮೂಲಕವೇ ತೆಗೆದುಕೊಂಡು ಹೋಗಬೇಕು. ಇದಕ್ಕಾಗಿ ಸರ್ಕಾರ ₹ 50ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಕಲ್ಲಡ್ಕ - ಸಾರಡ್ಕ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆಯ ಗಡಿ ಗುರುತಿಸಿ ಅಕ್ರಮ ಕಟ್ಟಡಗಳನ್ನು ತೆರವು ಮಾಡಬೇಕು. ರಸ್ತೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಾರ್ವಜನಿಕ ಹಿತಾಸಕ್ತಿಯನ್ನು ರಕ್ಷಿಸಬೇಕೆಂದು ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ. ಪತ್ರವನ್ನು ಕಂದಾಯ ಇಲಾಖೆಯ ಉಪತಹಶೀಲ್ದಾರ್ ವಿಜಯ ವಿಕ್ರಮ್ ಅವರಿಗೆ ನೀಡಲಾಯಿತು.

ಕರ್ನಾಟಕ ಕರಾವಳಿ ನೆಲಜಲ ಸಂರಕ್ಷಣಾ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಪಾಳಿಗೆ, 400ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಸಮಿತಿಯ ರೋಹಿತಾಶ್ವ ಬಂಗ, ರೈತ ಸಂಘದ ಉದಯ ಕುಮಾರ್, ವಸಂತ ಶೆಟ್ಟಿ ಎರ್ಮೆನೆಲೆ, ಅಬ್ದುಲ್ ರಹಿಮಾನ್, ಇಸುಬು, ಶಶಿಧರ, ವೆಂಕಟ್ರಮಣ ಭಟ್, ಮಹಮ್ಮದ್ ಶರೀಫ್, ಹಸೈನಾರ್ ಸೇರಾಜೆ, ನಾರಾಯಣ ಪೂಜಾರಿ, ಕೃಷ್ಣಪ್ಪ ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.