ಬೆಳ್ತಂಗಡಿ: ‘ಭಾರತದಲ್ಲಿ ಸರ್ಕಾರಿ ಅನುದಾನದಿಂದ ನಡೆಯುವ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಜಗತ್ತಿನಾದ್ಯಂತ ಹಿಂದೂ ಧರ್ಮ ವಿಚಾರ ಅಳವಡಿಸುವಲ್ಲಿ ಪ್ರತಿಬಂಧ ಹೇರಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆ' ಎಂದು ಹಿಂದೂ ಜನಜಾಗೃತಿ ಸಮಿತಿಯ ಕರುಣಾಕರ ಅಭ್ಯಂಕರ ಹೇಳಿದರು.
ಹಿಂದೂ ಜನಜಾಗೃತಿ ಸಮಿತಿ, ಸನಾತನ ಸಂಸ್ಥೆ ಹಾಗೂ ಇತರ ಸಮಾನಮನಸ್ಕ ಸಂಘಟನೆಗಳಿಂದ ಭಾನುವಾರ ಧರ್ಮಸ್ಥಳ ಗ್ರಾಮದ ಮುಲಿಕ್ಕಾರಿನ ಚಾಮುಂಡೇಶ್ವರಿ ಭಜನ ಮಂಡಳಿಯಲ್ಲಿ ನಡೆದ ‘ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಹಿಂದೂ ರಾಷ್ಟ್ರ ಜಾಗೃತಿ ಸಭೆ’ ಯಲ್ಲಿ ಅವರು ಮಾತನಾಡಿದರು.
‘ಭಾರತದಲ್ಲಿ ಮದರಸ ಹಾಗೂ ಕಾನ್ವೆಂಟ್ ಶಾಲೆಗಳನ್ನು ಸ್ಥಾಪಿಸಿ ಬೈಬಲ್ ಮತ್ತು ಇಸ್ಲಾಂನ ಬೋಧನೆ ಕಲಿಸಲಾಗುತ್ತಿದೆ. ಆದರೆ ಭಗವದ್ಗೀತೆ ಮತ್ತು ಹಿಂದೂ ಧರ್ಮವನ್ನು ಕಲಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರ ಅವಶ್ಯಕತೆ ಇದೆ’ ಎಂದು ಅಭಿಪ್ರಾಯಪಟ್ಟರು.
ಬೆಳ್ತಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ್ ಗಾಂಭೀರ್ ಮಾತನಾಡಿ, ‘ಧರ್ಮದ ಸದ್ವಿಚಾರ ತಿಳಿಯಲು ಧರ್ಮ ಶಿಕ್ಷಣದ ಅವಶ್ಯಕತೆ ಇದೆ’ ಎಂದು ತಿಳಿಸಿದರು.
ಸನಾತನ ಸಂಸ್ಥೆಯ ಆನಂದ ಗೌಡ ಮಾತನಾಡಿ, ‘ಸನಾತನ ಸಾಧಕರನ್ನು ಗುರಿಮಾಡುವ ಪ್ರಯತ್ನ ಭಾರತದ ವಿವಿಧ ತನಿಖಾ ಸಂಸ್ಥೆಗಳಿಂದ ನಡೆದಿದೆ. ನಾವು ವಿಶ್ವ ಕಲ್ಯಾಣಕಾರಿ ಹಿಂದೂರಾಷ್ಟ್ರದ ವಿಚಾರ ಮಂಡಿಸುತ್ತಿದ್ದೇವೆ ಎಂದು ನಮ್ಮನ್ನು ಭಯೋತ್ಪಾದಕರೆಂದು ತೀರ್ಮಾನಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ವಿಷಾದಿಸಿದರು.
ಭಜನ ಮಂಡಳಿ ಅಧ್ಯಕ್ಷ ಶೇಖರ ಎಂ.ಕೆ., ಉಪಾಧ್ಯಕ್ಷ ಶ್ರೀಕೃಷ್ಣಪ್ಪ ಕಾಜೋಡಿ, ಕಾರ್ಯದರ್ಶಿ ಭರತ್ ಎಂ.ಕೆ., ಧರ್ಮಸ್ಥಳದ ಕೃಷಿ ಪತ್ತಿನ ಸಂಘದ ಮ್ಯಾನೇಜರ್ ರವಿಂದ್ರನ್ ಡಿ., ಮಜ್ದೂರ್ ಸಂಘದ ಬೆಳ್ತಂಗಡಿ ತಾಲ್ಲೂಕಿನ ಕಾರ್ಯದರ್ಶಿ ಜಯರಾಜ ಸಾಲಿಯಾನ್, ಚಿರಂಜೀವಿ ಯುವಕ ಮಂಡಲದ ಸದಸ್ಯರಾದ ರವೀಂದ್ರ ಕಾನರ್ಪ, ಸನಾತನ ಸಂಸ್ಥೆಯ ರೇವತಿ ಕಾರ್ಯತಡ್ಕ, ಹೇಮಲತಾ ಇಂದಬೆಟ್ಟು, ಹಿಂದೂ ಜನಜಾಗೃತಿ ಸಮಿತಿಯ ಶಶಿಧರ್ ಗೌಡ, ಹರೀಶ್ ಗೌಡ ಮುದ್ದಿನಡ್ಕ, ಹರೀಶ್ ಕೋಟ್ಯಾನ್ ನೆರಿಯ ಉಪಸ್ಥಿತರಿದ್ದರು. ನಿಶ್ಚಿತಾ ಸೂತ್ರಸಂಚಾಲನೆ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.