ಪುತ್ತೂರು/ಸುಳ್ಯ : ಒಂದು ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪದ ಮೇಲೆ ಪಂಜ ವಲಯದ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ವಿರುದ್ಧ ಸುಳ್ಯ ತಾಲ್ಲೂಕು ಬೆಳ್ಳಾರೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಒಂದು ಸಮುದಾಯದ ಒಂದು ಲಕ್ಷ ಹೆಣ್ಣು ಮಕ್ಕಳು ವೇಶ್ಯೆಯರಾಗಲು ಹಿಂದೂ ಸಂಘಟನೆಯ ಯುವಕರು ಕಾರಣ’ ಎಂದು ಈ ಅಧಿಕಾರಿ ಮೊಬೈಲ್ ಫೋನ್‌ನಲ್ಲಿ ಇನ್ನೊಬ್ಬರೊಂದಿಗೆ ಮಾತನಾಡುವಾಗ ಹೇಳಿದ್ದಾರೆ ಎನ್ನಲಾದ ತುಳು ಭಾಷೆಯಲ್ಲಿರುವ ಧ್ವನಿ ಮುದ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಸಂಬಂಧ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಜಿಲ್ಲೆ ವಿವಿಧೆಡೆಗಳಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲ್ಲೂಕು ಸಂಯೋಜಕ ಸಚಿನ್ ವಳಲಂಬೆ ನೀಡಿರುವ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
‘ಒಂದು ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಸಂಜೀವ ಪೂಜಾರಿ ಕೀಳುಮಟ್ಟದಲ್ಲಿ ಮಾತನಾಡಿದ್ದಾರೆ. ಅಲ್ಲದೆ, ಅಪಘಾತವಾದರೆ, ಕ್ರೈಂ ಆದರೆ, ಉಪಕಾರ ಮಾಡುವವರು ಮುಸ್ಲಿಂ ಪಂಗಡದವರು, ಹಿಂದೂಗಳು ಅದನ್ನು ಫೋಟೊ ತೆಗೆದುವೈರಲ್ ಮಾಡಿ ವಿಕೃತ ಆನಂದಪಡುವವರು ಎಂದು ಹೇಳಿದ್ದಾರೆ. ಹಿಂದೂ ಹುಡುಗಿಯರನ್ನು ಅಸಹ್ಯವಾಗಿ ಬಿಂಬಿಸಿ, ಅವಮಾನ ಮಾಡಿದ್ದಾರೆ ಎಂದು ಸಚಿನ್ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಅಧಿಕಾರಿ ವಶಕ್ಕೆ: ಸಂಜೀವ ಪೂಜಾರಿ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಧ್ವನಿ ಮುದ್ರಿಕೆ ಹಾಗೂ ಅಧಿಕಾರಿಯ ಧ್ವನಿ ಹೋಲಿಕೆ, ಇನ್ನಿತರ ವಿಚಾರಣೆ ನಂತರ, ಆರೋಪ ಸಾಬೀತಾದಲ್ಲಿ ಅವರನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರತಿಭಟನೆ: ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಹಾಗೂ ಭಜನೆಯಲ್ಲಿ ತೊಡಗುವ ಹೆಣ್ಣು ಮಕ್ಕಳನ್ನು ನಿರಂತರವಾಗಿ ಅಪಮಾನಿಸುತ್ತಿರುವ ಸಂಜೀವ ಪೂಜಾರಿ ಕಾಣಿಯೂರು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಶುಕ್ರವಾರ ಪುತ್ತೂರಿನಲ್ಲಿ ಪ್ರತಿಭಟನೆ ನಡೆಸಿದರು.
ಡಿವೈಎಸ್‌ಪಿ ಕಚೇರಿ ಎದುರು ಧರಣಿ ಕುಳಿತ ಕಾರ್ಯಕರ್ತರು, ‘ಸಂಜೀವ ಪೂಜಾರಿ ವಿರುದ್ಧ ಸುಳ್ಯ ತಾಲ್ಲೂಕಿನ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿ ಮೂರು ದಿನಗಳು ಕಳೆದ ಮೇಲೆ, ಪೊಲೀಸರು ಜಾಮೀನು ಸಿಗಬಹುದಾದ ಕಲಂಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.
ಹಿಂದೂ ಜಾಗರಣ ವೇದಿಕೆಯ ಮಂಗಳೂರು ಗ್ರಾಮಾಂತರ ವಿಭಾಗದ ಸಹ ಸಂಯೋಜಕ ಸಮಿತ್‌ರಾಜ್ ಮಾತನಾಡಿ, ‘ಅರಣ್ಯಾಧಿಕಾರಿ ವಿಷಯದಲ್ಲಿ ಪೊಲೀಸರು ತಾರತಮ್ಯ ಧೋರಣೆ ಅನುಸರಿಸಿದ್ದಾರೆ. ಅಸಡ್ಡೆ ತೋರಿದರೆ ಮುಂದೆ ಸಂಭವಿಸಬಹುದಾದ ಅನಾಹುತಗಳಿಗೆ ಪೊಲೀಸರು ಹೊಣೆಯಾಗುತ್ತಾರೆ. ಅಧಿಕಾರಿ ಇದೇ ಚಾಳಿ ಮುಂದುವರಿಸಿದರೆ, ಸಾವಿರಾರು ಹೆಣ್ಣು ಮಕ್ಕಳನ್ನು ಸೇರಿಸಿಕೊಂಡು ಚಪ್ಪಲಿ ಸೇವೆ ಮಾಡಲು ಮತ್ತು ನಾಲಗೆ ಕತ್ತರಿಸಲು ನಮಗೆ ಗೊತ್ತಿದೆ’ ಎಂದರು.
ಸಂಘಟನೆಯ ಸಹ ಸಂಯೋಜಕ ನರಸಿಂಹ ಮಾಣಿ ಮಾತನಾಡಿ, ಅಧಿಕಾರಿಯನ್ನು ಶಾಶ್ವತವಾಗಿ ಮನೆಗೆ ಕಳುಹಿಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದರು.
ಅಧಿಕಾರಿಯನ್ನು ಬಂಧಿಸುವಂತೆ ಪ್ರತಿಭಟನಕಾರರು ಪಟ್ಟುಹಿಡಿದರು. ‘ಬಂಧಿಸಲು ಹೋದಾಗ ಅಧಿಕಾರಿ ಸಿಕ್ಕಿಲ್ಲ’ ಎಂದು ಡಿವೈಎಸ್‌ಪಿ ಅರುಣ್ ನಾಗೇಗೌಡ ಸ್ಪಷ್ಟನೆ ನೀಡಿದಾಗ, ‘ಅವರು ಮನೆಯಲ್ಲೇ ಇದ್ದಾರೆ. ಅವರನ್ನು ಬಂಧಿಸುವ ತನಕ ಪ್ರತಿಭಟನೆ ಹಿಂಪಡೆಯಲಾಗದು’ ಎಂದ ಪ್ರತಿಭಟನಕಾರರು ಭಜನೆ ಹಾಡತೊಡಗಿದರು. ಡಿವೈಎಸ್‌ಪಿ, ಅಧಿಕಾರಿಯನ್ನು ಬಂಧಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು. ನಂತರ ಪೊಲೀಸರು ಅಧಿಕಾರಿಯನ್ನು ವಶಕ್ಕೆ ಪಡೆದರು.
ವಜಾಗೊಳಿಸಿ: ಹಿಂದೂ ಸಮುದಾಯದ ಹೆಣ್ಣುಮಕ್ಕಳು ಮತ್ತು ಹಿಂದೂ ಸಂಘಟನೆಗಳ ಕುರಿತು ಆಕ್ಷೇಪಾರ್ಹ ಮಾತುಗಳನ್ನಾಡಿರುವ ಅರಣ್ಯ ಅಧಿಕಾರಿ ಸಂಜೀವ್ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಶಾಸಕ ವಿ. ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ಹಿಂದೂ ಸಮುದಾಯದ ಹೆಣ್ಣುಮಕ್ಕಳು, ಹಿಂದೂ ಸಂಘಟನೆಗಳ ಕುರಿತು ಆಕ್ಷೇಪಾರ್ಹ ಮಾತುಗಳನ್ನಾಡಿರುವ ಅರಣ್ಯ ಅಧಿಕಾರಿ ಸಂಜೀವ ಅವರನ್ನು ಸೇವೆಯಿಂದ ವಜಾಗೊಳಿಸಬೇಕುವಿ. ಸುನಿಲ್ ಕುಮಾರ್, ಕಾರ್ಕಳ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.