ADVERTISEMENT

ಬಿಜೆಪಿಯಲ್ಲಿ ಗುಲಾಮರಿಗೆ ಮಾತ್ರ ಬೆಲೆ: ಹಿಂದುತ್ವವಾದಿ ಮುಖಂಡ ಸತ್ಯಜಿತ್ ಸುರತ್ಕಲ್

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 20:37 IST
Last Updated 1 ಏಪ್ರಿಲ್ 2024, 20:37 IST
<div class="paragraphs"><p>ಸತ್ಯಜಿತ್ ಸುರತ್ಕಲ್ </p></div>

ಸತ್ಯಜಿತ್ ಸುರತ್ಕಲ್

   

- ಪ್ರಜಾವಾಣಿ ಚಿತ್ರ

ಮಂಗಳೂರು: ‘ನಾನು ಬ್ರಾಹ್ಮಣ, ಲಿಂಗಾಯಿತ, ಒಕ್ಕಲಿಗ ಅಥವಾ ಬಂಟ ಆಗಿದ್ದರೆ ಬಿಜೆಪಿಯಲ್ಲಿ ಅವಕಾಶ ಸಿಗುತ್ತಿತ್ತೇನೋ. ಸ್ವಂತ ಶಕ್ತಿ ಇರುವವರಿಗೆ ಬೆಲೆ ಇಲ್ಲ, ಗುಲಾಮರಿಗೆ ಮಾತ್ರ ಇಲ್ಲಿ ಬೆಲೆ’ ಎಂದು ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷರಾಗಿರುವ ಹಿಂದುತ್ವವಾದಿ ಮುಖಂಡ ಸತ್ಯಜಿತ್ ಸುರತ್ಕಲ್ ಆರೋಪಿಸಿದರು.

ADVERTISEMENT

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಾನು ಶೂದ್ರ ಸಮುದಾಯದಲ್ಲಿ ಹುಟ್ಟಿದವನು. ಶೂದ್ರರು ಸೇವೆ ಮಾಡುತ್ತ ಶೂದ್ರರಾಗಿಯೇ ಇರಬೇಕು ಎಂಬ ಮಾನಸಿಕತೆ ಬಿಜೆಪಿಯಲ್ಲಿದೆ’ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಅವರು ಹೇಳಿದರು.

‘ಎರಡು ತಿಂಗಳುಗಳಿಂದ ‘ಟೀಂ ಸತ್ಯಜಿತ್ ಸುರತ್ಕಲ್’ ಹೆಸರಿನಲ್ಲಿ ಅಭಿಯಾನ, ಸಮಾವೇಶಗಳು ನಡೆದಿವೆ. ಬಿಜೆಪಿ ಟಿಕೆಟ್ ಘೋಷಣೆಯಾದ ನಂತರವೂ ನಮ್ಮ ತಂಡದವರು ಪಕ್ಷದಲ್ಲಿ ಸ್ಥಾನಮಾನ ಕೊಡುವಂತೆ ಕೇಳುವುದಾಗಿ ಹೇಳಿ, ನನ್ನನ್ನು ತಡೆದಿದ್ದರು. ಆದರೆ, ಟಿಕೆಟ್ ಘೋಷಣೆಯಾಗಿ ಇಷ್ಟು ದಿನ ಕಳೆದ ಮೇಲೂ ಯಾವುದೇ ಜವಾಬ್ದಾರಿ ನೀಡುವ ಬಗ್ಗೆ ಮಾತಿಲ್ಲ. ಹೀಗಾಗಿ, ಯಾವುದೇ ನಿರ್ಧಾರ ಕೈಗೊಳ್ಳಲು ನಾನು ಸ್ವತಂತ್ರ’ ಎಂದು ಸತ್ಯಜಿತ್ ಹೇಳಿದರು.

‘ಮಾತೆತ್ತಿದರೆ ಬಿ.ಎಸ್.ಯಡಿಯೂರಪ್ಪ ಅವರು ಸಮಬಾಳು ಸಮಪಾಲು ಎನ್ನುತ್ತಾರೆ. ಕಾಂತರಾಜು ವರದಿ ಪ್ರಕಾರ 60 ಲಕ್ಷ ಜನಸಂಖ್ಯೆ ಇರುವ ಲಿಂಗಾಯತ ಸಮುದಾಯದ ಒಂಬತ್ತು ಮಂದಿಗೆ ಟಿಕೆಟ್, 1 ಕೋಟಿಗೂ ಅಧಿಕ ಜನಸಂಖ್ಯೆ ಇರುವ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ 5–6, ಬಿಲ್ಲವ ಸಮುದಾಯಕ್ಕೆ ಮೂರು ಸ್ಥಾನ, 15 ಲಕ್ಷ ಜನಸಂಖ್ಯೆ ಇರುವ ಬ್ರಾಹ್ಮಣರಿಗೆ ಮೂರು, ಒಕ್ಕಲಿಗರಿಗೆ ನಾಲ್ಕು ಕಡೆ ಟಿಕೆಟ್ ದೊರೆತಿವೆ. ಕಾಂಗ್ರೆಸ್, ಬಿಜೆಪಿ ನಡುವೆ ಬಹಳ ವ್ಯತ್ಯಾವೇನಿಲ್ಲ. ಆದರೆ, ಹಿಂದುತ್ವ ಎಂದು ಹೇಳಿಕೊಳ್ಳುವ ಬಿಜೆಪಿಯ ಸಾಮಾಜಿಕ ನ್ಯಾಯದ ಬಗ್ಗೆ ನಾಯಕರು ಉತ್ತರಿಸಬೇಕು‘ ಎಂದು ಸವಾಲೆಸೆದರು.

‘ಹಿಂದೆ ಜನಾರ್ದನ ಪೂಜಾರಿ ಗೆಲುವು ಅಸಾಧ್ಯವಾಗುವಲ್ಲಿ ನಾನೂ ಕಾರಣನಾಗಿದ್ದೇನೆ. ಆಗ ಸಾಮಾಜಿಕ ಅನ್ಯಾಯದ ಕಲ್ಪನೆ ಇರಲಿಲ್ಲ. ಆಗ, ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು– ಬಂಧು ಎಂಬ ಮಾತು ನಿಜವಾಗುತ್ತದೆ ಎಂಬ ನಂಬಿಕೆ ಇತ್ತು. ಆದರೆ, ನಾವೆಲ್ಲರೂ ಬಲಿಪಶುಗಳಾದೆವು’ ಎಂದರು.

ನಾರಾಯಣಗುರು ವಿಚಾರ ವೇದಿಕೆ ಪ್ರಮುಖರಾದ ಶಿವು ಹೂಗಾರ್, ಕೆ.ಪಿ. ಲಿಂಗೇಶ್, ಶಶಿಧರ ಎಂ. ಅಮೀನ್,  ಜಗನ್ನಾಥ್ ಕೋಟೆ, ಸಂದೀಪ್ ಇದ್ದರು.

‘ಕೋಟರಿಗೆ ಟಿಕೆಟ್: ಸಮುದಾಯಕ್ಕೆ ಅನ್ಯಾಯ’

‘ಉಡುಪಿ– ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದು ಸಂತೋಷ. ಆದರೆ ಅವರು ವಿಧಾನ ಪರಿಷತ್ ಸದಸ್ಯರಾಗಿ ನಂತರ ವಿರೋಧ ಪಕ್ಷದಲ್ಲಿ ನಾಯಕರಾಗಿ ಇದ್ದವರು. ಈ ಉನ್ನತ ಸ್ಥಾನ ಬಿಲ್ಲವ ಸಮುದಾಯಕ್ಕೆ ಮತ್ತೆ ಸಿಗಲು ಸಾಧ್ಯವೇ? ಬಿಲ್ಲವರಿಗೆ ಟಿಕೆಟ್ ಕೊಡಬೇಕೆಂದಿದ್ದರೆ ಕ್ಷೇತ್ರದಲ್ಲಿ ಬೇರೆ ನಾಯಕರು ಇದ್ದರು. ಕೋಟರನ್ನು ಲೋಕಸಭೆ ಚುನಾವಣೆಯ ಅಭ್ಯರ್ಥಿಯನ್ನಾಗಿ ಮಾಡಿ ಎರಡು ಸ್ಥಾನಗಳನ್ನು ಸಮುದಾಯ ಕಳೆದುಕೊಳ್ಳುವಂತೆ ಮಾಡಲಾಗಿದೆ. ಇದರಿಂದ ಸಮುದಾಯಕ್ಕೆ ಅನ್ಯಾಯವಾಗಿದೆ’ ಎಂದು ಸತ್ಯಜಿತ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.