ಪುತ್ತೂರು (ದಕ್ಷಿಣ ಕನ್ನಡ): ‘ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಸಾಮರ್ಥ್ಯ ಇದ್ದರೆ ಮೋದಿ-ಯೋಗಿ ಹೆಸರು ಬಳಕೆ ಮಾಡದೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ, ಅರುಣ್ ಕುಮಾರ್ ಪುತ್ತಿಲ ಪಡೆದ ಮತದ ಶೇ10ರಷ್ಟಾದರೂ ಗಳಿಸಿ ತೋರಿಸಲಿ’ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಮತ್ತು ಅಭಿನವ ಭಾರತ ಸಂಘಟನೆ ಮುಖಂಡರು ಸವಾಲು ಹಾಕಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಂದ್ರ ಅಮೀನ್ ಹಾಗೂ ಅಭಿನವ ಭಾರತದ ಬೆಳ್ತಂಗಡಿ ತಾಲ್ಲೂಕು ಘಟಕದ ಅಧ್ಯಕ್ಷ ಪುನೀತ್ ಸುವರ್ಣ, ‘ಬಿಜೆಪಿಯ ನಕಲಿ ಹಿಂದುತ್ವದ ವಿರುದ್ಧ ನಾವು ಹೋರಾಟ ನಡೆಸುತ್ತಲೇ ಇದ್ದೇವೆ. ಪ್ರಸ್ತುತ ಬಿಜೆಪಿಗರಿಗೆ ನೈತಿಕತೆಯೇ ಉಳಿದಿಲ್ಲ. ಹಿಂದೂ ಕಾರ್ಯಕರ್ತರ ಮೇಲೆ ಪುತ್ತೂರಿನಲ್ಲಿ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ನಳಿನ್ ಕುಮಾರ್ ಕಟೀಲ್ ತಕ್ಷಣರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.
‘ಅಧಿಕಾರ ಸಿಕ್ಕ ತಕ್ಷಣ ಬಾಯಿಗೆ ಬಂದಂತೆ ಮಾತನಾಡುವುದು ತಪ್ಪು. ಹೇಗೆ ಪೀಠದಲ್ಲಿ ಕೂರಿಸಿದ್ದೇವೆಯೋ ಹಾಗೇ ಇಳಿಸೋದು ನಮಗೆ ಗೊತ್ತು. ನಿಮಗೆ ಸ್ಪಲ್ಪವಾದರೂ ನೈತಿಕತೆ ಇದ್ದರೆ ಮಾತನಾಡದೆ ಮೌನವಾಗಿ ಕುಳಿತುಕೊಳ್ಳಿ’ ಎಂದು ಅವರು ಮುಖಂಡರಿಗೆ ಎಚ್ಚರಿಕೆ ನೀಡಿದರು.
‘ನಿಮ್ಮ ಮುಖ ನೋಡಿ ನಾವು ಸುಮ್ಮನಿರುವುದಲ್ಲ. ಮೋದಿ ಅವರ ಮುಖ ನೋಡಿ ಸುಮ್ಮನಿದ್ದೇವೆ. ಯಾವುದಾದರೂ ಒಬ್ಬ ಶಾಸಕನ ಮಗನಾಗಲೀ, ಮಂತ್ರಿಯ ಮಗನಾಗಲೀ ನಮ್ಮ ಹಾಗೇ ಹೋರಾಟದ ಹಾದಿಯಲ್ಲಿದ್ದಾರಾ’ ಎಂದು ಅವರು ಪ್ರಶ್ನಿಸಿದರು.
‘ಬಿಜೆಪಿ ವಿರೋಧ ಪಕ್ಷದಲ್ಲಿರುವವಾಗ ಎಷ್ಟು ಹಿಂದೂ ಸಮಾಜೋತ್ಸವ ನಡೆಯಿತು. ಕಳೆದ ಮೂರವರೆ ವರ್ಷದಲ್ಲಿ ಆಡಳಿತ ನಡೆಸಿದ ಬಿಜೆಪಿ ಯಾಕೆ ಸಮಾಜೋತ್ಸವ ಮಾಡಿಲ್ಲ. ಬಿಜೆಪಿ ಓಟು ಹಾಕಿದ್ರೆ ಮಾತ್ರ ಹಿಂದುವಾ. ನಿಮ್ಮ ಜತೆ ಬಂದರೆ ಮಾತ್ರ ಹಿಂದುತ್ವವಾ. ಹಿಂದು ತಲೆಬಾಗುವುದು ಬಿಜೆಪಿ ಪತಾಕೆಗೆ ಅಲ್ಲ. ಭಗವಾಧ್ವಜಕ್ಕೆ ಎಂಬುವುದು ನಿಮಗೆ ಅರ್ಥವಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.