ADVERTISEMENT

ವಿದ್ಯಾರ್ಥಿ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಆರೋಪ: ಉಪನ್ಯಾಸಕ ದೋಷಮುಕ್ತ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 5:22 IST
Last Updated 13 ನವೆಂಬರ್ 2024, 5:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಂಗಳೂರು: ನಗರದ ಕಾಲೇಜೊಂದರ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪ ಎದುರಿಸುತ್ತಿದ್ದ ಕಾಲೇಜಿನ ಉಪನ್ಯಾಸಕರೊಬ್ಬರನ್ನು ದೋಷ ಮುಕ್ತಗೊಳಿಸಿ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ತ್ವರಿತ ಗತಿ ವಿಶೇಷ ನ್ಯಾಯಾಲಯ (ಪೊಕ್ಸೊ) ದೋಷಮುಕ್ತ ಗೊಳಿಸಿದೆ.

‘ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ನೃತ್ಯ ಅಭ್ಯಾಸ ಮಾಡುತ್ತಿದ್ದಾಗ ಉಪನ್ಯಾಸಕ ಕಾರ್ತಿಕ್ ನೋಟ್ಸ್‌ ನೋಡುವ ನೆಪದಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯನ್ನು ಕರೆಸಿಕೊಂಡಿದ್ದರು. ನಂತರ  ದೈಹಿಕ ಶಿಕ್ಷಕರ ಕೊಠಡಿಗೆ ಕರೆದೊಯ್ದು ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ನೀಡುವುದಾಗಿ ಆಮಿಷವೊಡ್ಡಿ ಬಟ್ಟೆ ಕಳಚಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದರು. ನಂತರವೂ ಹಲವು ಬಾರಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದರು‘ ಎಂದು ಆರೋಪಿಸಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ದೂರು ನೀಡಿದ್ದ. ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ನಡೆಸಿದ್ದ ಸಹಾಯಕ ಪೊಲೀಸ್ ಆಯುಕ್ತ ಪಿ. ಎ. ಹೆಗಡೆ ಮತ್ತು ಎಸ್.ಮಹೇಶ್ ಕುಮಾರ್ ದೋಷರೋಪಣ ಪಟ್ಟಿ ಸಲ್ಲಿಸಿದ್ದರು.

‘ಪರೀಕ್ಷೆಗಳಲ್ಲಿ ಅತ್ಯಂತ ಕಡಿಮೆ ಅಂಕಗಳಿಸಿದ್ದನ್ನು ಹಾಗೂ ಈ ಸಲುವಾಗಿ ಆರೋಪಿ ಉಪನ್ಯಾಸಕರು ಪೋಷಕರನ್ನು ಕಾಲೇಜಿಗೆ ಹಲವು ಬಾರಿ ಕರೆಸಿದ್ದನ್ನು ವಿದ್ಯಾರ್ಥಿಯು ನ್ಯಾಯಾಲಯದಲ್ಲಿ ಸಾಕ್ಷ್ಯಗಳ ವಿಚಾರಣಾ ಸಮಯದಲ್ಲಿ ಒಪ್ಪಿಕೊಂಡಿದ್ದ. ಕಾಲೇಜಿನ ವಿದ್ಯಾರ್ಥಿಗಳು ಮಾದಕ ವಸ್ತು ಸೇವಿಸಿದ ಪ್ರಕರಣ ಸಂಬಂಧ ಪೋಷಕರನ್ನು ಕಾಲೇಜಿಗೆ ಕರೆಸಿದ್ದನ್ನೂ ಒಪ್ಪಿಕೊಂಡಿದ್ದ. ವಿದ್ಯಾರ್ಥಿಯನ್ನು ಪೊಲೀಸರು ಡ್ರಗ್ಸ್ ಸೇವನೆ ವಿಚಾರವಾಗಿ ವಿಚಾರಣೆ ಮಾಡಿ, ಎಚ್ಚರ ನೀಡಿದ ಕುರಿತು ಕಾಲೇಜಿನ ಪ್ರಾಂಶುಪಾಲರು ನ್ಯಾಯಾಲದಲ್ಲಿ ಹೇಳಿಕೆ ನೀಡಿದ್ದರು. ವಿದ್ಯಾರ್ಥಿ ಡ್ರಗ್ಸ್ ಸೇವನೆ ಮಾಡಿದ ಬಗ್ಗೆ ಆರೋಪಿ ಉಪನ್ಯಾಸಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಹಗೆಯಿಂದ ವಿದ್ಯಾರ್ಥಿಯು ಕತೆ ಕಟ್ಟಿ ಉಪನ್ಯಾಸಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದ’ ಎಂದು ಆರೋಪಿ ಪರ ವಕೀಲರಾದ ರಾಜೇಶ್ ಕುಮಾರ್ ಅಮ್ಟಾಡಿ ವಾದಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.