ADVERTISEMENT

ಎಂಎಲ್‌ಸಿ ಉಪ ಚುನಾವಣೆ | ನಾನು ಟಿಕೆಟ್‌ ಕೇಳಿರಲಿಲ್ಲ: ನಳಿನ್‌

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 5:46 IST
Last Updated 6 ಅಕ್ಟೋಬರ್ 2024, 5:46 IST
ಸುದ್ದಿಗೋಷ್ಠಿಯಲ್ಲಿ ನಳಿನ್ ಕುಮಾರ್ ಕಟೀಲ್‌ ಮಾತನಾಡಿದರು. 
ಸುದ್ದಿಗೋಷ್ಠಿಯಲ್ಲಿ ನಳಿನ್ ಕುಮಾರ್ ಕಟೀಲ್‌ ಮಾತನಾಡಿದರು.    

ಮಂಗಳೂರು: ‘ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ನಾನು ಟಿಕೆಟ್‌ ಆಕಾಂಕ್ಷಿಯಾಗಿರಲಿಲ್ಲ. ಹೊಸಬರಿಗೆ ‌ಅವಕಾಶ ಕೊಡಿ ಎಂದು ಪಕ್ಷದ ಕೋರ್ ಕಮಿಟಿಯ ಸಭೆಯಲ್ಲೂ ಸ್ಪಷ್ಟಪಡಿಸಿದ್ದೆ’ ಎಂದು ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್‌ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ್ದ ಅವರು, ‘ಮೂರು ಸಲ ಸಂಸದನಾಗಿದ್ದ ನನ್ನ ಹೆಸರನ್ನು ಪಕ್ಷದ ರಾಜ್ಯ ಘಟಕವು ಅಭ್ಯರ್ಥಿ ಆಯ್ಕೆ ವೇಳೆ ಸಹಜವಾಗಿಯೇ ಕೇಂದ್ರದ ನಾಯಕರಿಗೆ ಕಳುಹಿಸಿದೆ. ಈ ಹಿಂದೆ ಮೂಲ್ಕಿ –ಮೂಡುಬಿದರೆ ಕ್ಷೇತ್ರದ ಅಭ್ಯರ್ಥಿಯಾಗುವಂತೆ ವರಿಷ್ಠರು ಹೇಳಿದಾಗಲೂ ನಾನು ನಿರಾಕರಿಸಿದ್ದೆ’ ಎಂದರು. 

‘ಸಿದ್ದಾಂತಕ್ಕೆ ಬದ್ಧನಾದ ನಾನು ಕಾರ್ಯಕರ್ತನಾಗಿ ಪಕ್ಷಕ್ಕೆ  ಬಂದವ.  ಪಕ್ಷ ನನಗೆ ಮೂರು ಸಲ ಸಂಸದನಾಗಲು ಅವಕಾಶ ನೀಡಿದೆ. ರಾಜ್ಯ ಘಟಕದ ಅಧ್ಯಕ್ಷನಾಗುವಂತೆ ಅಮಿತ್ ಶಾ ಅವರು ಮಧ್ಯ ರಾತ್ರಿ ಕರೆ ಮಾಡಿ ತಿಳಿಸಿದ್ದರು. ಪಕ್ಷದ ಕಚೇರಿಯಲ್ಲಿ ಕಸ ಗುಡಿಸಿ ಎಂದರೆ ಅದನ್ನೂ ಮಾಡುತ್ತೇನೆ. ಕ್ಷೇತ್ರ ಉಳಿಸಿಕೊಳ್ಳುವುದಕ್ಕೆ ನನ್ನ ಆದ್ಯತೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿಗೆ ಅನುದಾನ ಬಿಡುಗಡೆ ಆಗಿಲ್ಲ. ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕುಂಠಿತವಾಗಿದೆ. ಗ್ಯಾರಂಟಿ ಹಣವೂ ನಾಲ್ಕು ತಿಂಗಳುಗಳಿಂದ ಬಿಡುಗಡೆಯಗಿಲ್ಲ. ಯುವ ನಿಧಿಗೆ ನಯಾಪೈಸೆ ಬಂದಿಲ್ಲ’ ಎಂದರು.

‘ಬಿಜೆಪಿ ನೇತೃತ್ವದ ಸರ್ಕಾರವನ್ನು ಶೇ 40 ಪರ್ಸೆಂಟ್‌ ಸರ್ಕಾರ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಈಗಿನದು ಕಳ್ಳರ ಸರ್ಕಾರ. ರಾಜ್ಯ ದಿವಾಳಿಯತ್ತ ಹೋಗುತ್ತಿದೆ. ಜನ‌ ಹಿಡಿ ಶಾಪ ಹಾಕುತ್ತಿದ್ದಾರೆ.‌ ಮೂಡಾ ನಿವೇಶನ ಹಂಚಿಕೆ ಹಗರಣ ಹಾಗೂ ವಾಲ್ಮೀಕಿ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆತ್ಮವೇ ಇಲ್ಲ. ಇದ್ದಿದ್ದರೆ ಮೊದಲು ರಾಜೀನಾಮೆ ನೀಡಿ ತನಿಖೆ ಎದುರಿಸುತ್ತಿದ್ದರು. ಆದರ್ಶಗಳ ಬಗ್ಗೆ ಮಾತನಾಡುವ ಅವರ ಗೌರವ ಆಗ ಹೆಚ್ಚಾಗುತ್ತಿತ್ತು’ ಎಂದರು. 

‘ಕ್ಷೇತ್ರದಲ್ಲಿ 6,040 ಮತದಾರರಿದ್ದು, ಅವರಲ್ಲಿ 3,753 ಮಂದಿ ಬಿಜೆಪಿ ಬೆಂಬಲಿಗರು. ಸ್ಥಳೀಯ ಸಂಸ್ಥೆಗಳ ಸಮಸ್ಯೆ ಬಗ್ಗೆ ಗಮನ ಸೆಳೆಯುವ ಶಕ್ತಿ ಕಿಶೋರ್ ಕುಮಾರ್‌ಗೆ ಇದೆ. ಅವರು ಗೆಲ್ಲಲಿದ್ದಾರೆ’ ಎಂದರು.

ಜೆಡಿಎಸ್‌ ಮುಖಂಡ ಜಿ.ಟಿ.ದೇವೇಗೌಡ ಅವರು ಸಿದ್ದರಾಮಯ್ಯ ಪರ ಮಾತನಾಡಿದ್ದು ಆ ಪಕ್ಷದ ಆಂತರಿಕ ವಿಷಯ’ ಎಂದರು.

‘ಚುನಾವಣಾ ಬಾಂಡ್‌ಗೂ ಆ ಬಗ್ಗೆ ನನ್ನ ವಿರುದ್ಧ ದೂರು ನೀಡಿದ ವ್ಯಕ್ತಿಗೂ ಸಂಬಂಧವೇ ಇಲ್ಲ. ಹಾಗಾಗಿ ಜನಪ್ರತಿಬಿಧಿ ನ್ಯಾಯಲಯದ ಆದೇಶದ ಮೇರೆಗೆ ನನ್ನ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ ನೀಡಿದೆ’ ಎಂದರು.

‘ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅಂತಹವರು ಎಲ್ಲ ಪಕ್ಷಗಳಲ್ಲೂ ಇರುತ್ತಾರೆ. ಜವಾಬ್ದಾರಿ ಇದ್ದಾಗ ಭಿನ್ನಾಭಿಪ್ರಾಯಗಳೂ ಸಹಜ.‌ ಅವರ ಹೇಳಿಕೆ ಬಗ್ಗೆ ಪಕ್ಷದ ವರಿಷ್ಠರೇ ತೀರ್ಮಾನಿಸಲಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ಕಿಶೋರ್ ಕುಮಾರ್‌, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್‌ ಕುಂಪಲ, ಪ್ರಮುಖರಾದ 
ರಾಕೇಶ್ ರೈ, ರಾಜಗೋಪಾಲ ರೈ, ಸಂಜಯ ಪ್ರಭು ಹಾಗೂ ಪ್ರೇಮಾನಂದ ಶೆಟ್ಟಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.