ADVERTISEMENT

ಹಿಂದುತ್ವ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ಸಹಿಸಲಾರೆ: ಕ್ಯಾ.ಬ್ರಿಜೇಶ್ ಚೌಟ

ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಸಂಸದ ಕ್ಯಾ.ಬ್ರಿಜೇಶ್ ಚೌಟ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 6:44 IST
Last Updated 30 ಜೂನ್ 2024, 6:44 IST
ಸಂಸದ  ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಜಪೆಯ ವಿಮಾನ ನಿಲ್ದಾಣದಿಂದ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆತರುವಾಗ ಅಭಿಮಾನಿಗಳು ಶನಿವಾರ ಹೂಮಳೆಗೆರೆದರು. ಡಿ.ವೇದವ್ಯಾಸ ಕಾಮತ್‌, ರಾಜೇಶ್‌ ನಾಯ್ಕ್ ಉಳಿಪಾಡಿ,  ಸತೀಶ್ ಕುಂಪಲ, ಕ್ಯಾ.ಗಣೇಶ್ ಕಾರ್ಣಿಕ್‌ ಮತ್ತಿತರರು ಜೊತೆಯಲ್ಲಿದ್ದರು– ಪ್ರಜಾವಾಣಿ ಚಿತ್ರ
ಸಂಸದ  ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಜಪೆಯ ವಿಮಾನ ನಿಲ್ದಾಣದಿಂದ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆತರುವಾಗ ಅಭಿಮಾನಿಗಳು ಶನಿವಾರ ಹೂಮಳೆಗೆರೆದರು. ಡಿ.ವೇದವ್ಯಾಸ ಕಾಮತ್‌, ರಾಜೇಶ್‌ ನಾಯ್ಕ್ ಉಳಿಪಾಡಿ,  ಸತೀಶ್ ಕುಂಪಲ, ಕ್ಯಾ.ಗಣೇಶ್ ಕಾರ್ಣಿಕ್‌ ಮತ್ತಿತರರು ಜೊತೆಯಲ್ಲಿದ್ದರು– ಪ್ರಜಾವಾಣಿ ಚಿತ್ರ   

ಮಂಗಳೂರು: ‘ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಬಂದ ಬಳಿಕ ಹಿಂದುತ್ವದ ಕಾರ್ಯಕರ್ತರಿಗೆ  ತೊಂದರೆ ಕೊಡಲಾಗುತ್ತಿದೆ. ಇದನ್ನು ಸಹಿಸುವುದಿಲ್ಲ. ಇದರ ವಿರುದ್ಧ ಗಟ್ಟಿಧ್ವನಿಯಾಗಿ ನಿಲ್ಲುತ್ತೇನೆ’ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಶನಿವಾರ ಇಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಹಿಂದುತ್ವ ವಿರೋಧಿ, ಬಡವರ ವಿರೋಧಿ ಹಾಗೂ ಭ್ರಷ್ಟಾಚಾರದ ಕೂಪವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸಂಘರ್ಷ ಮಾಡಲಿದ್ದೇವೆ. ಈ ಸರ್ಕಾರವನ್ನು ತೊಲಗಿಸುವವರೆಗೆ ವಿರಮಿಸುವುದಿಲ್ಲ’ ಎಂದರು. 

‘ಈ ಚುನಾವಣೆಯಲ್ಲಿ ದಕ್ಕಿದ ಗೆಲುವು ನನ್ನದಲ್ಲ. ಇದು ಕಾರ್ಯಕರ್ತರ, ಹಿಂದುತ್ವದ, ರಾಷ್ಟ್ರೀಯತೆಯ ಗೆಲುವು. ಜಾತಿ ಆಧಾರದಲ್ಲಿ ಚುನಾವಣೆ ಎದುರಿಸಿದವರಿಗೆ ಇದು ಧರ್ಮ ಮತ್ತು ನ್ಯಾಯದ ನೆಲ ಎಂಬುದನ್ನು ತೋರಿಸಿದ್ದೀರಿ. ಹಿಂದುತ್ವವನ್ನು ಒಡೆಯಲು ಯತ್ನಿಸಿದವರಿಗೆ ತಕ್ಕ ಉತ್ತರ ನೀಡಿದ್ದೀರಿ’ ಎಂದರು. 

ADVERTISEMENT

‘ಕುದ್ಮುಲ್‌ ರಂಗರಾಯರ ಜನ್ಮದಿನದಂದೇ ವಿಜಯೋತ್ಸವ ಆಚರಿಸುತ್ತಿರುವುದು ಖುಷಿಯ ವಿಚಾರ’ ಎಂದರು.

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಲ್ಲಿ ಮರಣ ಹೊಂದಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. 

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಕುಂಪಲ, ‘ಪಕ್ಷದ ಹೊಸ ತಂಡಕ್ಕೆ ಹೊಸ ಅಭ್ಯರ್ಥಿಯನ್ನು ಗೆಲ್ಲಿಸುವುದು ಸವಾಲಾಗಿತ್ತು. ನಿಕಟಪೂರ್ವ ಸಂಸದ ನಳಿನ್ ಕುಮಾರ್ ಕಟೀಲ್‌, ಜಿಲ್ಲಾ ಘಟಕದ ನಿಕಟ ಪೂರ್ವ ಅಧ್ಯಕ್ಷ ಸುದರ್ಶನ್‌, ಎಲ್ಲ ಮಂಡಲಗಳ ಅಧ್ಯಕ್ಷರು, ವಿವಿಧ ಮೋರ್ಚಾಗಳು ಒಟ್ಟಾಗಿ ಕೆಲಸ ಮಾಡಿದ್ದರಿಂದ ಇದು ಸಾಧ್ಯವಾಗಿದೆ’ ಎಂದರು.

ಕ್ಯಾ.ಗಣೇಶ್ ಕಾರ್ಣಿಕ್, ‘ದೇಶದಲ್ಲಿ ಪಕ್ಷದ ನಿರೀಕ್ಷೆಗೆ ಏಟು ಬಿದ್ದಿದ್ದು, ಮುಂದಿನ ಐದು ವರ್ಷ   ಸವಾಲಿನದು. ದೇಶವನ್ನು ವಿಘಟಿಸುವ ದುಷ್ಟ ಶಕ್ತಿಗಳು ಚುನಾವಣೆ ನಂತರ ಎಚ್ಚೆತ್ತಿವೆ. ದೇಶದ ಪ್ರಗತಿಗೆ ಅಡ್ಡಗೋಡೆಯಾಗಿ ಕೆಲಸ ಮಾಡುವ ಶಕ್ತಿಗಳನ್ನು ಮಣಿಸಲು ನಾವೆಲ್ಲ ಒಂದೇ ದಿಕ್ಕಿನಲ್ಲಿ ಹೆಜ್ಜೆ ಹಾಕಬೇಕಿದೆ’ ಎಂದರು.

ಉಪಮೇಯರ್ ಸುನೀತಾ,  ಬಿಜೆಪಿ ಮುಖಂಡರಾದ ನಿತಿನ್ ಕುಮಾರ್‌,  ಬಿ.ನಾಗರಾಜ ಶೆಟ್ಟಿ, ಕಿಶೋರ್ ಬೊಟ್ಯಾಡಿ, ಸಂಜೀವ ಮಠಂದೂರು, ಹೇಮಾವತಿ ಶೆಟ್ಟಿ, ಜೆಡಿಎಸ್ ದ.ಕ.ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಕ್ಷಿತ್ ಸುವರ್ಣ ಮತ್ತಿತರರು ಭಾಗವಹಿಸಿದ್ದರು. ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು. ರಾಕೇಶ್ ರೈ ಕಾರ್ಯಕ್ರಮ ನಿರೂಪಿಸಿದರು.

-ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆ

ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಸಲ ಜಿಲ್ಲೆಗೆ ಭೇಟಿ ನೀಡಿದ ಕ್ಯಾ.ಬ್ರಿಜೇಶ್ ಚೌಟರನ್ನು ಬಜಪೆ ವಿಮಾನನಿಲ್ದಾಣದಿಂದ ನಗರದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ಕಾರ್ಯಕರ್ತರು ಅಭಿಮಾನಿಗಳು ದಾರಿಯುದ್ದಕ್ಕೂ ಅಲ್ಲಲ್ಲಿ ಹೂವಿನ ಮಳೆಗೆರೆದರು. ಹಾರ ಹಾಕಿ ಪುಷ್ಫಗುಚ್ಛ ನೀಡಿ ನೂತನ ಸಂಸದರನ್ನು ಅಭಿನಂದಿಸಿದರು. ಸತೀಶ ಕುಂಪಲ ಶಾಸಕರಾದ ಡಾ. ವೈ.ಭರತ್‌ ಶೆಟ್ಟಿ ಡಿ.ವೇದವ್ಯಾಸ ಕಾಮತ್ ಭಾಗಿರಥಿ ಮುರುಳ್ಯ ಹರೀಶ್ ಪೂಂಜ ರಾಜೇಶ್ ನಾಯ್ಕ್ ಉಮಾನಾಥ ಕೋಟ್ಯಾನ್ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸುಧೀರ್ ಶೆಟ್ಟಿ ಕಣ್ಣೂರು ಮೊದಲಾದವರು ವಾಹನದಲ್ಲಿ ಸಾಗಿಬಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.