ADVERTISEMENT

ಟಿ20 ವಿಶ್ವಕಪ್: ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್

​ಪ್ರಜಾವಾಣಿ ವಾರ್ತೆ
Published 5 ಮೇ 2024, 23:52 IST
Last Updated 5 ಮೇ 2024, 23:52 IST
ನಾಸ್ತುಷ್ ಕೆಂಜಿಗೆ
ನಾಸ್ತುಷ್ ಕೆಂಜಿಗೆ   

ಮೂಡಿಗೆರೆ (ಚಿಕ್ಕಮಗಳೂರು ಜಿಲ್ಲೆ): ಮೂಡಿಗೆರೆಯ ನಾಸ್ತುಷ್ ಪ್ರದೀಪ್ ಕೆಂಜಿಗೆ ಅವರು  ಜೂನ್‌ 2ರಿಂದ ನಡೆಯಲಿರುವ ಟಿ20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಆತಿಥೇಯ ಅಮೆರಿಕ ತಂಡವನ್ನು ಪ್ರತಿನಿಧಿಸಲಿದ್ದಾರೆ. 

ಅಮೆರಿಕ ರಾಷ್ಟ್ರೀಯ ತಂಡದದಲ್ಲಿ ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್ ಪಂದ್ಯಗಳಲ್ಲಿ ಆಡಿರುವ ನಾಸ್ತುಷ್, ಇದೇ ಮೊದಲ ಸಲ ವಿಶ್ವಕಪ್‌ ಟೂರ್ನಿಯ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಈ ಬಾರಿಯ ಟೂರ್ನಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. 

ತಾಲ್ಲೂಕಿನ ಕೆಂಜಿಗೆ ಗ್ರಾಮದ ಕಾಫಿ ಬೆಳೆಗಾರ ಹಾಗೂ ಲೇಖಕ ಪ್ರದೀಪ್ ಕೆಂಜಿಗೆ–ಶೃತಕೀರ್ತಿ ದಂಪತಿಯ ಪುತ್ರ ನಾಸ್ತುಷ್‌ ಅಮೆರಿಕಾದಲ್ಲಿ ನೆಲೆಸಿದ್ದಾರೆ.

ADVERTISEMENT

‘ನಾಸ್ತುಷ್‌ ಜನಿಸಿದ್ದು ಅಮೆರಿಕದಲ್ಲಿ. ನಾನು ಉದ್ಯೋಗ ನಿಮಿತ್ತ ಹರಿಜೋನಾದಲ್ಲಿ ನೆಲೆಸಿದ್ದೆ. ಮಗನಿಗೆ ಒಳ್ಳೆಯ ಹೆಸರು ಸೂಚಿಸುವಂತೆ ಅಲ್ಲಿನ ರೆಡ್ ಇಂಡಿಯನ್ಸ್‌ ಬಳಿ ಕೇಳಿದಾಗ ನಾಸ್ತುಷ್ (ಮರುಭೂಮಿಯ ಸಿಂಹ) ಎಂದು ಹೇಳಿದರು. ನಾಸ್ತುಷ್ ಮೂಡಿಗೆರೆ ಮತ್ತು ಬೆಂಗಳೂರಿನ ದಯಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದಾನೆ. ಸ್ವಸ್ತಿಕ್ ಕ್ರಿಕೆಟರ್ಸ್‌ ಕ್ಲಬ್‌ನಲ್ಲಿ ಆಡಿದ್ದಾನೆ. ಅಮೆರಿಕದ ಪೌರತ್ವ ಇತ್ತು. ಉದ್ಯೋಗಕ್ಕಾಗಿ ಅಲ್ಲಿಗೇ ಹೋದ. ಈಚೆಗೆ ಕ್ರಿಕೆಟ್‌ಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದಾನೆ’ ಎಂದು  ಪ್ರದೀಪ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಎಡಗೈ ಸ್ಪಿನ್ನರ್ ಮತ್ತು ಬಲಗೈ ಬ್ಯಾಟರ್ ಆಗಿರುವ ನಾಸ್ತುಷ್‌, 40 ಏಕದಿನ ಮತ್ತು 4 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ. ಅಮೆರಿಕದಲ್ಲಿ ನಡೆಯುವ ಇಂಟರ್‌ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಎಮಿರೇಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡಗಳನ್ನು ಪ್ರತಿನಿಧಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 38 ವಿಕೆಟ್ ಗಳಿಸಿರುವ ನಾಸ್ತುಷ್‌ ಅವರು ಕೆನಡಾ ಎದುರು ನಡೆದ ಸರಣಿಯಲ್ಲಿ ಮೊದಲ ಬಾರಿ ಚುಟುಕು ಕ್ರಿಕೆಟ್ ಕಣಕ್ಕೆ ಇಳಿದಿದದ್ದರು. ಆ ಸರಣಿಯಲ್ಲಿ ಒಟ್ಟು 4 ವಿಕೆಟ್ ಉರುಳಿಸಿದ್ದಾರೆ. 21ಕ್ಕೆ 3 ವಿಕೆಟ್ ಅವರ ಶ್ರೇಷ್ಠ ಸಾಧನೆ. 

ಟಿ20 ವಿಶ್ವಕಪ್‌ ಟೂರ್ನಿಯ ‘ಎ’ ಗುಂಪಿನಲ್ಲಿರುವ ಅಮೆರಿಕಾ ಉದ್ಘಾಟನಾ ಪಂದ್ಯದಲ್ಲಿ ಕೆನಡಾವನ್ನು ಎದುರಿಸಲಿದೆ. ಭಾರತ, ಪಾಕಿಸ್ತಾನ ಮತ್ತು ಐರ್ಲೆಂಡ್ ತಂಡಗಳೂ ಇದೇ ಗುಂಪಿನಲ್ಲಿ ಇವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.