ಮಂಗಳೂರು: ಪರವಾನಗಿರಹಿತ ಪಿಸ್ತೂಲ್ ಹೊಂದಿದ್ದ ಆರೋಪಿಗಳಿಬ್ಬರನ್ನು ನಗರದ ಸಿಸಿಬಿ ಪೊಲೀಸರು ಬಜಪೆ ಗ್ರಾಮದಲ್ಲಿ ಬಂಧಿಸಿದ್ದು, ಅವರಿಂದ ಪಿಸ್ತೂಲು ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಉಳ್ಳಾಲ ತಾಲ್ಲೂಕಿನ ಇರಾ ಗ್ರಾಮದ ಬಾಳೆಪುಣಿಯ ಹೊಸಹಿತ್ತಿಲು ನಿವಾಸಿ ಅಬ್ಬಾಸ್ ಅಲಿಯಾಸ್ ಬೆಡಿ ಅಬ್ಬಾಸ್ (61) ಹಾಗೂ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೈವಳಿಕೆ ಬೀಡು ನಿವಾಸಿ ಯಶವಂತ್ ಕುಮಾರ್ (45) ಬಂಧಿತ ಆರೋಪಿಗಳು. ಅಬ್ಬಾಸ್ ಪ್ರಸ್ತುತ ಮಂಜೇಶ್ವರ ಮೀಯಪದವಿ ಚಿಗುರುಪಾದೆಯಲ್ಲಿ ವಾಸವಿದ್ದಾನೆ. ಯಶವಂತ್ ಕುಮಾರ್ ಕುತ್ತಾರಿನ ಗುರುಪ್ರಿಯ ಐರಿಸ್ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ನೆಲಿಸಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಮಂಗಳೂರು ತಾಲ್ಲೂಕಿನ ಬಜಪೆ ಗ್ರಾಮದ ಒಡ್ಡಿದಕಲದಲ್ಲಿ ಇಬ್ಬರು ವ್ಯಕ್ತಿಗಳು ಪರವಾನಗಿ ಇಲ್ಲದ ಪಿಸ್ತೂಲ್ ಇಟ್ಟುಕೊಂಡು ಬೈಕ್‌ನಲ್ಲಿ ತಿರುಗುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಸ್ಥಳಕ್ಕೆ ತೆರಳಿ ಅವರಿಬ್ಬರನ್ನು ವಶಕ್ಕೆ ಪಡೆದಿದ್ದರು. ಆರೋಪಿಗಳ ಬಳಿ ಇದ್ದ ಪಿಸ್ತೂಲ್, ಎರಡು ಮೊಬೈಲ್‌ಗಳು, ಹೀರೊ ಹೊಂಡಾ ಫ್ಯಾಷನ್ ಪ್ಲಸ್ ಬೈಕ್‌ಗಳನ್ನು ಸಿಸಿಬಿ ಪೊಲೀಸರು ಸ್ವಾಧೀನಕ್ಕೆ ಪಡೆದಿದ್ದಾರೆ. ಅವುಗಳ ಒಟ್ಟು ಮೌಲ್ಯ ₹ 1.45 ಲಕ್ಷ ಎಂದು ಅಂದಾಜಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
‘ಆರೋಪಿ ಅಬ್ಬಾಸ್ ವಿರುದ್ಧ ಈ ಹಿಂದೆ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ಹಾಗೂ ಅಬಕಾರಿ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಯಶವಂತ ಕುಮಾರ್ ವಿರುದ್ಧ ಈ ಹಿಂದೆ ಮಂಗಳೂರು ದಕ್ಷಿಣ ಠಾಣೆ ಮತ್ತು ಮಂಜೇಶ್ವರ ಠಾಣೆಯಲ್ಲಿ ಹಲ್ಲೆ ಪ್ರಕರಣ, ಕುಂಬಳೆ ಠಾಣೆಯಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಬದಿಯಡ್ಕ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣವೊಂದರಲ್ಲೂ ಆತ ಆರೋಪಿಯಾಗಿದ್ದ’ ಎಂದು ತಿಳಿಸಿದ್ದಾರೆ.
ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಶ್ಯಾಮ್ ಸುಂದರ್ ಎಚ್.ಎಂ, ಪಿಎಸ್ಐಗಳಾದ ರಾಜೇಂದ್ರ ಬಿ., ಸುದೀಪ್ ಎಂ.ವಿ, ಶರಣಪ್ಪ ಭಂಡಾರಿ, ನರೇಂದ್ರ, ಎಎಸ್ಐ ಮೋಹನ್ ಕೆ.ವಿ ಹಾಗೂ ಸಿಬ್ಬಂದಿಯವರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.