ಮಂಗಳೂರು: ಬಜಾಲ್ ಗ್ರಾಮದಲ್ಲಿ ನೇತ್ರಾವತಿ ನದಿ ಪಾತ್ರದಲ್ಲಿ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಸುತ್ತಿದ್ದ ಐದು ದೋಣಿಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
‘ಕಣ್ಣೂರು, ಬಜಾಲ್ ಮತ್ತು ಬಡ್ಲ ಗ್ರಾಮಗಳಲ್ಲಿ ನೇತ್ರಾವತಿ ನದಿಯಲ್ಲಿ ಸಿಆರ್‌ಜೆಡ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಹಿರಿಯ ಭೂವಿಜ್ಞಾನಿ ಕೆ.ಎಂ.ನಾಗಭೂಷಣ್ ಮತ್ತು ಭೂವಿಜ್ಞಾನಿ ಗಿರೀಶ್ ಮೋಹನ್ ಎಸ್.ಎನ್. ಜೊತೆಗೆ ನಾನು ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದ್ದೆ. ಬಜಾಲ್ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿರುವುದು ಪತ್ತೆಯಾಗಿತ್ತು. ಇದರಲ್ಲಿ ತೊಡಗಿದ್ದ 5 ದೋಣಿಗಳನ್ನು ವಶಕ್ಕೆ ಪಡೆದಿದ್ದೇವೆ’ ಎಂದು ಇಲಾಖೆಯ ಭೂವಿಜ್ಞಾನಿ ಎಚ್.ಎಸ್.ಮಹದೇಶ್ವರ ಅವರು ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ.’
‘ಬಜಾಲ್‌ನ ಮೊಹಮ್ಮದ್ ತೋಹಿಬ್, ಮೊಹಮ್ಮದ್ ಅಶ್ರಫ್, ಅಜರ್ ಬಜಾಲ್, ಹಸನಬ್ಬ (ಎಂ ಕೆ ಮೋನು) ಮತ್ತು ಅಬ್ದುಲ್ ರೆಹಮಾನ್ ಈ ದೊಣಿಗಳ ಮಾಲೀಕರು. ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಈ ದೋಣಿಗಳ ಮಾಲೀಕರ ಹಾಗೂ ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹದೇಶ್ವರ ಅವರು ಒತ್ತಾಯಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.