ಮಂಗಳೂರು: ಕೇಂದ್ರ ಸರ್ಕಾರದ ಕಾನೂನು ವ್ಯವಹಾರಗಳ ಇಲಾಖೆಯ ಭಾರತೀಯ ಕಾನೂನು ಸೇವೆಗಳ (ಐಎಲ್‌ಎಸ್) ಬೆಂಗಳೂರು ಶಾಖೆ ಉಸ್ತುವಾರಿಯಾಗಿದ್ದ ಕುಡುಪು ಸುದರ್ಶನ್ (53) ಗುರುವಾರ ಬೆಳಿಗ್ಗೆ ನಿಧನರಾದರು. ಅವರಿಗೆ ತಾಯಿ, ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.
ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಕೇಶವ ಅವರ ಪುತ್ರ ಸುದರ್ಶನ್ ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಕಾನೂನು ಪದವಿಯ ನಂತರ ಉಡುಪಿಯಲ್ಲಿ ಏಳು ವರ್ಷ ವಕೀಲರಾಗಿದ್ದರು. 2003ರಲ್ಲಿ ಸಿಬಿಐಗೆ ನೇಮಕವಾದರು. ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಬಿಹಾರದಲ್ಲಿ ವೃತ್ತಿ ಆರಂಭಿಸಿದ ಅವರು ನಂತರ ಬೆಂಗಳೂರಿಗೆ ವರ್ಗವಾದರು.
ಸೀನಿಯರ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಬಡ್ತಿ ಹೊಂದಿ ಹೈದರಾಬಾದ್‌ಗೆ ವರ್ಗವಾದರು. ವಾಪಸ್ ಬೆಂಗಳೂರಿಗೆ ಬಂದ ನಂತರ ಕೇಂದ್ರದ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ಇಲಾಖೆಯಲ್ಲಿ ಹೆಚ್ಚುವರಿ ಸರ್ಕಾರಿ ವಕೀಲರಾಗಿ ಬಡ್ತಿ ಲಭಿಸಿತು. ಐಎಲ್‌ಎಸ್ ಉಸ್ತುವಾರಿಯಾಗಿ ಈಚೆಗಷ್ಟೇ ಬಡ್ತಿ ಲಭಿಸಿತ್ತು ಎಂದು ಅವರ ಪುತ್ರಿ, ವಕೀಲೆ ಕೀರ್ತನಾ ‘ಪ್ರಜಾವಾಣಿ’ಗೆ ತಿಳಿಸಿದರು.
ಅನಾರೋಗ್ಯದಿಂದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಮಂಗಳೂರು ಹೊರವಲಯದ ಕುಡುಪು ದೇವಸ್ಥಾನದ ಸಮೀಪವಿರುವ ಮನೆಯಲ್ಲಿ ಸುದರ್ಶನ್ ಅವರ ಪಾರ್ಥಿವ ಶರೀರವನ್ನು ಶುಕ್ರವಾರ ಮಧ್ಯಾಹ್ನದ ವರೆಗೆ ಇರಿಸಲಾಗುವುದು. ನಂತರ ಮಂಗಳೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕೀರ್ತನಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.