ADVERTISEMENT

ಕಾಳಿಂಗ ಸರ್ಪಗಳಿಗೆ ಮೈಕ್ರೊ ಚಿಪ್‌ ಅಳವಡಿಕೆ

ವಂಶದೊಳಗೆ ತಳಿ ಸಂವರ್ಧನೆ ತಡೆಯಲು ಕ್ರಮ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 14:38 IST
Last Updated 26 ಜುಲೈ 2024, 14:38 IST
ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಕಾಳಿಂಗ ಸರ್ಪಕ್ಕೆ ಮೈಕ್ರೊಚಿಪ್‌ ಅಳವಡಿಸಲಾಯಿತು
ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಕಾಳಿಂಗ ಸರ್ಪಕ್ಕೆ ಮೈಕ್ರೊಚಿಪ್‌ ಅಳವಡಿಸಲಾಯಿತು   

ಮಂಗಳೂರು: ನಗರದ ಹೊರವಲಯದಲ್ಲಿರುವ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಕಾಳಿಂಗ ಸರ್ಪಗಳಿಗೆ ಮೈಕ್ರೊಚಿಪ್‌ ಅಳವಡಿಸುವ ಕಾರ್ಯ ಆರಂಭಿಸಲಾಗಿದೆ.

‘ಒಂದು ವರ್ಗದ ಪ್ರಾಣಿಗಳು ಬರಿಗಣ್ಣಿಗೆ ಸಾಮಾನ್ಯವಾಗಿ ಒಂದೇ ರೀತಿ ಕಾಣಿಸುತ್ತವೆ. ಅವುಗಳನ್ನು ಸುಲಭವಾಗಿ ಪ್ರತ್ಯೇಕಿಸಲು ಸಾಧ್ಯವಾಗಬೇಕು ಎಂಬ ಕಾರಣಕ್ಕೆ ಚಿಪ್‌ ಆಳವಡಿಸಲಾಗುತ್ತಿದೆ. ಪಂಜರದಲ್ಲೇ ಪ್ರಾಣಿಗಳ ತಳಿ ಸಂವರ್ಧನೆ ಮಾಡುವಾಗ, ಒಂದೇ ವಂಶವಾಹಿಯ ಪ್ರಾಣಿಗಳೊಳಗೆ ತಳಿ ಸಂವರ್ಧನೆಯಾಗುವುದನ್ನು ತಡೆಯಲು ಚಿಪ್‌ ಅಳವಡಿಸುವುದು ಅಗತ್ಯವಾಗಿದೆ’ ಎಂದು ಪಿಲಿಕುಳ ಜೈವಿಕ ಪಾರ್ಕ್‌ನ ನಿರ್ದೇಶಕ ಜಯಪ್ರಕಾಶ ಭಂಡಾರಿ ತಿಳಿಸಿದರು.

ವನ್ಯಪ್ರಾಣಿಗಳ ಅಧ್ಯಯನ, ವೈಜ್ಞಾನಿಕ ಸಂಶೋಧನೆಯ ಜೊತೆಗೆ ಪ್ರಾಣಿಸಂಕುಲದ ಸಂರಕ್ಷಣೆಯೂ ಪಿಲಿಕುಳ ಜೈವಿಕ ಉದ್ಯಾನದ ಉದ್ದೇಶವಾಗಿರುವುದರಿಂದ, ಪಂಜರದಲ್ಲಿಯೇ ಕಾಳಿಂಗಸರ್ಪ ಹಾಗೂ ಇತರ ಹಲವು ಪ್ರಾಣಿಗಳ ತಳಿ ಸಂವರ್ಧನೆ ಮಾಡುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರ ಅಂಗವಾಗಿ ಕಾಳಿಂಗ ಸರ್ಪಗಳಿಗೆ ಮೈಕ್ರೊ ಚಿಪ್‌ ಅಳವಡಿಸಲಾಗುತ್ತಿದೆ.

ADVERTISEMENT

‘ಹಾವುಗಳಷ್ಟೇ ಅಲ್ಲ, ಕಾಡು ಪ್ರಾಣಿಗಳಿಗೂ ಮೈಕ್ರೊಚಿಪ್‌ ಅಳವಡಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಮೈಕ್ರೊಚಿಪ್‌ ಹೊಂದಿರುವ ಸಣ್ಣ ಎಲೆಕ್ಟ್ರಾನಿಕ್‌ ಉಪಕರಣವೊಂದನ್ನು ಪ್ರಾಣಿಯ ಚರ್ಮದಡಿಯಲ್ಲಿ ಅಳವಡಿಸಲಾಗುವುದು. ಇದಕ್ಕೆ ಸ್ಕ್ಯಾನರ್‌ ಸಹಿತವಾದ ಒಂದು ಸಣ್ಣ ರಿಸೀವರ್‌ ಇರುತ್ತದೆ. ಪ್ರತಿ ಪ್ರಾಣಿಯ ಹೆಸರು, ಟ್ರಾನ್ಸ್‌ಪಾಂಡರ್‌ ಸಂಖ್ಯೆ ಹಾಗೂ ವಂಶವಾಹಿಯು ಅದರಲ್ಲಿ ದಾಖಲಾಗಿರುತ್ತದೆ’ ಎಂದು ಭಂಡಾರಿ ತಿಳಿಸಿದರು.

ಮೃಗಾಲಯದಲ್ಲಿರುವ ಹುಲಿ, ಸಿಂಹ, ಚಿರತೆ ಹಾಗೂ ಇತರ ಪ್ರಾಣಿಗಳಿಗೆ ಮೈಕ್ರೊ ಚಿಪ್‌ ಅಳವಡಿಸುವ ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಒಂದು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಪ್ರಾಣಿಗಳಲ್ಲಿ ಅಳವಡಿಸಲಾಗುವ ಮೈಕ್ರೊ ಚಿಪ್‌ಗಳನ್ನು ವಿದೇಶದಿಂದ ತರಿಸಲಾಗಿದೆ.

ಕತ್ತೆ ಕಿರುಬ, ಕಾಡು ನಾಯಿ, ಭಾರತೀಯ ಬೂದು ತೋಳ, ಕರಡಿ, ಮೊಸಳೆ ಮುಂತಾದ ಆಯ್ದ ತಳಿಯ ಪ್ರಾಣಿಗಳಲ್ಲೂ ಚಿಪ್‌ ಅಳವಡಿಸಲಾಗುವುದು. ಈ ಸಂದರ್ಭದಲ್ಲೇ ಲಿಂಗಪತ್ತೆ ಉಪಕರಣವನ್ನು ಬಳಸಿ ಆಯಾ ಪ್ರಾಣಿಯ ಲಿಂಗವನ್ನು ಗುರುತಿಸುವುದು, ಪ್ರಾಣಿಯ ನಿಖರವಾದ ಉದ್ದ, ಅಗಲ, ಎತ್ತರಗಳನ್ನು ದಾಖಲಿಸುವ ಕಾರ್ಯವೂ ನಡೆಯಲಿದೆ. ಹಕ್ಕಿಗಳ ಲಿಂಗ ಪತ್ತೆಮಾಡಲು ಡಿಎನ್‌ಎ ಪರೀಕ್ಷೆ ನಡೆಸಲಾಗುವುದು ಎಂದರು.

ಮೃಗಾಲಯದಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಯಲ್ಲೇ ವೈಜ್ಞಾನಿಕ ರೀತಿಯಲ್ಲಿ ಮೈಕ್ರೊಚಿಪ್‌ ಅಳವಡಿಸಲಾಗುವುದು. ಅದು ಜೀವನಪೂರ್ತಿ ಪ್ರಾಣಿಯ ಶರೀರದಲ್ಲಿರಲಿದೆ ಎಂದು ಜಯಪ್ರಕಾಶ ಭಂಡಾರಿ ತಿಳಿಸಿದರು.

ಸಸ್ತನಿಗಳು, ಪಕ್ಷಿಗಳು, ಸರೀಸೃಪಗಳು ಸೇರಿದಂತೆ 1200ಕ್ಕೂ ಹೆಚ್ಚು ಪ್ರಾಣಿಗಳನ್ನು ಪಿಲಿಕುಳ ಜೈವಿಕ ಉದ್ಯಾನ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.