ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಮಠ ಎಂಬಲ್ಲಿ ಚತುಷ್ಪಥ ಕಾಮಗಾರಿಯ ಅವ್ಯವಸ್ಥೆಯಿಂದ ಚರಂಡಿ ಮೂಲಕ ಹರಿಬೇಕಾದ ಮಳೆ ನೀರು, ರಸ್ತೆ ಬದಿಯ ಮನೆ ಅಂಗಳಕ್ಕೆ ನುಗ್ಗಿದೆ. ಮನೆ ಸುತ್ತ ಕೆಸರು ನೀರು ನಿಂತಿರುವುದರಿಂದ ಕುಟುಂಬ ಸದಸ್ಯರು ಮನೆಯಿಂದ ಹೊರಗೆ ಹೆಜ್ಜೆಯಿಡಲು ಆಗದ ಸ್ಥಿತಿ ನಿರ್ಮಾಣವಾಗಿದೆ.
ಉಪ್ಪಿನಂಗಡಿ ಗ್ರಾಮದ ಮಠ ನಿವಾಸಿ ಕಮಲಾ ಯಾನೆ ಗಿರಿಜಾ ಎಂಬುವರ ಮನೆಯ ಸುತ್ತ ಕೆಸರು ನೀರು ಕಟ್ಟಿಕೊಂಡು ನಿಂತಿದೆ. ಮನೆಯಂಗಳದ ಬಾವಿಯೊಳಗೂ ಕೆಸರು ನೀರು ಸೇರಿಕೊಂಡಿದೆ. ತೇವಾಂಶದಿಂದ ಬಾವಿಯಂಚಿನ ಮಣ್ಣು ಕುಸಿಯುವ ಅಪಾಯವಿದೆ. ಕೆಸರು ನೀರನ್ನು ಕುಡಿಯಲಾಗ ಸ್ಥಿತಿ ಮನೆಯವರದ್ದು. ಹೆದ್ದಾರಿ ಕಾಮಗಾರಿ ಸೃಷ್ಟಿಸಿರುವ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ ಕಮಲಾ, ತಮಗೆ ನ್ಯಾಯ ಒದಗಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಅಪೂರ್ಣ ಕಾಮಗಾರಿ: ಮಠದಿಂದ ಸುಬ್ರಹ್ಮಣ್ಯ ತಿರುವುತನಕ ರಸ್ತೆ ಬದಿಯಲ್ಲಿ ಚರಂಡಿಯನ್ನು ನಿರ್ಮಿಸಲಾಗಿದೆ. ಕೆಲವೆಡೆ ಚರಂಡಿಯನ್ನು ತಗ್ಗಿನಿಂದ ಎತ್ತರಕ್ಕೆ ಹರಿದು ಹೋಗುವಂತೆ ನಿರ್ಮಿಸಿರುವುದರಿಂದ ಮಳೆಯಾದಾಗ ನೀರು ಸರಾಗವಾಗಿ ಹರಿಯದೆ ಚರಂಡಿಯಲ್ಲಿ ಕಟ್ಟಿಕೊಂಡು ನಿಲ್ಲುತ್ತದೆ. ಚರಂಡಿಯಿಂದ ಉಕ್ಕುವ ನೀರು ರಸ್ತೆ ಬದಿಯ ಮನೆ ಅಂಗಳಕ್ಕೆ ನುಗ್ಗುತ್ತಿದೆ. ಬಹುತೇಕ ಕಡೆ ಚರಂಡಿ ಜೋಡಣೆ ಆಗಿಲ್ಲ. ಇಂತಹ ಸಮಸ್ಯೆ ಇರುವಲ್ಲಿ, ನೀರು ಕವಲೊಡೆದು ಮನೆ ಅಂಗಳ, ಜಮೀನಿಗೆ ಹರಿಯುತ್ತಿದೆ.
‘ನಾವು ಬಡವರು, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಮನೆ ಮಣ್ಣಿನ ಗೋಡೆಯಿಂದ ನಿರ್ಮಿಸಿದ್ದು, ಮಳೆ ನೀರು ಅಂಗಳದಲ್ಲಿ ನಿಂತು ಮನೆಯೇ ಕುಸಿದು ಬೀಳುವ ಆತಂಕದಲ್ಲಿದ್ದೇವೆ. ಕಳೆದ ವರ್ಷ ಹೆದ್ದಾರಿ ಎಂಜಿನಿಯರ್, ಗುತ್ತಿಗೆದಾರರು, ಶಾಸಕರು, ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಮನವಿ ಸಲ್ಲಿಸಿದ್ದೇವೆ. ಯಾರೂ ಸ್ಪಂದಿಸಲಿಲ್ಲ’ ಎಂದು ಕಮಲಾ ಮಾಧ್ಯಮದ ಎದುರು ಅಸಹಾಯಕತೆ ವ್ಯಕ್ತಪಡಿಸಿದರು.
ವಾರದೊಳಗೆ ಪರಿಹಾರ: ಭರವಸೆ
ಸ್ಥಳಕ್ಕೆ ಬಂದ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಈ ಸಮಸ್ಯೆಗಳನ್ನು ಅಲ್ಲಗಳೆದರು. ಇದಕ್ಕೆ ಆಕ್ಷೇಪಿಸಿದ ಸಾರ್ವಜನಿಕರು ಅವರನ್ನು ತರಾಟೆಗೆ ತೆಗೆದುಕೊಂಡರು. ಕೆ.ಎನ್.ಆರ್. ಸಂಸ್ಥೆಯ ಅಧಿಕಾರಿ ಮಹೇಂದ್ರ ಸಿಂಗ್ ಸಮಸ್ಯೆಗಳನ್ನು ಆಲಿಸಿ ಸ್ಥಳ ಪರಿಶೀಲನೆ ನಡೆಸಿದರು. ಸಮಸ್ಯೆಯ ಗಂಭೀರತೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿ ‘ಒಂದು ವಾರದ ಒಳಗಾಗಿ ಇಲ್ಲಿನ ಸಮಸ್ಯೆಯನ್ನು ಬಗೆಹರಿಸುತ್ತೇವೆ’ ಎಂದರು. ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ರಶೀದ್, ಸ್ಥಳೀಯರಾದ ಇಸಾಕ್ ಮತ್ತಿತರರು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.