ಮಂಗಳೂರು: ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ತೆರೆಯುವ ಡೇ ಕೇರ್ ಕಿಮೊಥೆರಪಿ ಕೇಂದ್ರಗಳ ಉದ್ಘಾಟನೆ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
10 ಆಸನಗಳ ಕಿಮೊಥೆರಪಿ ಕೇಂದ್ರಗಳು ಎಲ್ಲ ಜಿಲ್ಲೆಗಳಲ್ಲೂ ಸೇವೆಗೆ ಲಭ್ಯವಾಗಲಿವೆ. ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಅಥವಾ ಯಾವುದಾದರೂ ಜಿಲ್ಲಾ ಕೇಂದ್ರದಲ್ಲಿ ಮುಖ್ಯಮಂತ್ರಿಯವರು ಈ ಯೋಜನೆಗೆ ಚಾಲನೆ ನೀಡುವರು ಎಂದು ಶನಿವಾರ ಇಲ್ಲಿ ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ತಜ್ಞರು ಇರುವುದಿಲ್ಲ. ಇದ್ದರೂ ಕೆಲಸದ ಒತ್ತಡ ಹೆಚ್ಚು ಇರುತ್ತದೆ. ಆದ್ದರಿಂದ ಕಿಮೊಥೆರಪಿ ಕೇಂದ್ರಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಿಸಲು ನಿರ್ಧರಿಸಲಾಗಿದೆ. ಮಂಗಳೂರಿನಲ್ಲಿ ಯೆನೆಪೋಯ ವೈದ್ಯಕೀಯ ಕಾಲೇಜಿನ ನೆರವು ಪಡೆಯಲಾಗುವುದು ಎಂದು ವಿವರಿಸಿದರು.
ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಜಿಲ್ಲಾಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ. ಆದರೆ ವೆನ್ಲಾಕ್ ಆಸ್ಪತ್ರೆಯಲ್ಲಿ ಶುಲ್ಕ ಪಡೆಯುತ್ತಿದ್ದಾರೆ ಎಂಬ ದೂರು ಕೇಳಿಬಂದಿದ್ದು ಪರಿಶೀಲಿಸಲಾಗುತ್ತಿದೆ. ಲೋಪಗಳು ಕಂಡುಬಂದರೆ ಈಗ ನಿರ್ವಹಣೆ ಮಾಡುತ್ತಿರುವ ಕಂಪನಿಯನ್ನು ಕೈಬಿಟ್ಟು ಹೊಸ ಗುತ್ತಿಗೆ ನೀಡಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.