ಮಂಗಳೂರು: ಕರಾವಳಿ ಕರ್ನಾಟಕ ಮತ್ತು ಕೇರಳ ಕರಾವಳಿಯಲ್ಲಿ ಪ್ರಚಲಿತದಲ್ಲಿರುವ ಬ್ಯಾರಿ ಭಾಷೆಗೆ ಸ್ವತಂತ್ರ ಲಿಪಿಯನ್ನು ಸಿದ್ಧಪಡಿಸಲಾಗಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದರು.
ಶುಕ್ರವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾರಿ ಲಿಪಿಯನ್ನು ಬಿಡುಗಡೆಗೊಳಿಸಿದ ಅವರು, ಸುದ್ದಿಗಾರರಿಗೆ ಮಾಹಿತಿ ನೀಡಿದರು. ‘1400 ವರ್ಷಗಳ ಇತಿಹಾಸ ಹೊಂದಿರುವ ಬ್ಯಾರಿ ಭಾಷಾ ಸಾಹಿತ್ಯವನ್ನು ಕನ್ನಡ ಲಿಪಿಯ ಮೂಲಕ ಪ್ರಸ್ತುತಪಡಿಸಲಾಗುತ್ತಿತ್ತು. ಸಾಹಿತ್ಯಿಕವಾಗಿ ಶ್ರೀಮಂತವಾಗಿರುವ, 20 ಲಕ್ಷ ಜನರ ಮಾತೃಭಾಷೆಯಾಗಿರುವ ಈ ಭಾಷೆಗೆ ಸ್ವತಂತ್ರ ಲಿಪಿ ಇಲ್ಲ ಎನ್ನುವ ಕೊರಗನ್ನು ನೀಗಿಸಲು, ಕಳೆದ ಆರು ತಿಂಗಳುಗಳಿಂದ ಶ್ರಮವಹಿಸಿದ 11 ಮಂದಿ ತಜ್ಞರ ತಂಡವು, ಎಲ್ಲ ಆಯಾಮಗಳಿಂದ ಪರಾಮರ್ಶಿಸಿ, ಲಿಪಿಯನ್ನು ಅಂತಿಮಗೊಳಿಸಿದೆ’ ಎಂದರು.
‘10 ವರ್ಷಗಳಿಂದ ಬ್ಯಾರಿ ಭಾಷೆಗೆ ಸ್ವತಂತ್ರ ಲಿಪಿ ರಚಿಸುವ ಪ್ರಯತ್ನಗಳು ನಡೆಯುತ್ತಿದ್ದವು. ಅಬ್ದುಲ್ ಸಮದ್ ಬಾವಾ ಪುತ್ತೂರು, ಡಾ. ಮುಹಮ್ಮದ್ ಫೌಝೀದ್ ಕಲ್ಲಿಕೋಟೆ ಅವರು ಈ ಬಗ್ಗೆ ವಿಶೇಷ ಆಸಕ್ತಿವಹಿಸಿ, ಅಕಾಡೆಮಿ ಮೂಲಕ ಪರಿಚಯಿಸುವ ಪ್ರಯತ್ನ ಮಾಡಿದ್ದರು. ಕಳೆದ ವರ್ಷ ನೇಮಕಗೊಂಡ ಅಕಾಡೆಮಿಯ ನೂತನ ಸಮಿತಿಯು ಈ ಕಾರ್ಯಯೋಜನೆಯನ್ನು ಅನುಷ್ಠಾನಕ್ಕೆ ಪ್ರತ್ಯೇಕ ಸಮಿತಿ ರಚನೆ ಮಾಡಿತು. ವಿದ್ವಾಂಸ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಸಹ ಪ್ರಾಧ್ಯಾಪಕ ಡಾ. ಅಬೂಬಕ್ಕರ್ ಸಿದ್ದೀಕ್, ಸಹಾಯಕ ಪ್ರಾಧ್ಯಾಪಕ ಹೈದರ್ ಅಲಿ, ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ, ಸಂಪಾದಕ ಎ.ಕೆ. ಕುಕ್ಕಿಲ, ಡಾ. ಮುಹಮ್ಮದ್ ಫೌಝೀದ್ ಕಲ್ಲಿಕೋಟೆ, ಅಬ್ದುಲ್ ಸಮದ್ ಬಾವಾ ಪುತ್ತೂರು, ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಪತ್ರಕರ್ತ ಹಂಝ ಮಲಾರ್ ಸಮಿತಿಯಲ್ಲಿದ್ದರು’ ಎಂದು ತಿಳಿಸಿದರು.
ಆರನೇ ತರಗತಿಯಿಂದ ಬ್ಯಾರಿ ಭಾಷೆಯನ್ನು ತೃತೀಯ ಭಾಷೆಯಾಗಿ ಐಚ್ಛಿಕವಾಗಿ ಕಲಿಯಲು ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಸಂಗ್ರಹಿಸಿದ ಮಾಹಿತಿಯನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸಕ್ತಿ ತೋರಿದ್ದಾರೆ ಎಂದು ವಿವರಿಸಿದರು.
ಲಿಪಿಯ ವೈಶಿಷ್ಟ್ಯವೇನು?
ಯಾವುದೇ ಭಾಷೆಯ ಎರವಲು ಇಲ್ಲದೇ ಸಿದ್ಧಪಡಿಸಿರುವ ಬ್ಯಾರಿ ಲಿಪಿಯಲ್ಲಿ 13 ಸ್ವರಾಕ್ಷರಗಳು, 25 ವರ್ಗೀಯ ವ್ಯಂಜನಗಳು, ಎಂಟು ಅವರ್ಗೀಯ ವ್ಯಂಜನಾಕ್ಷರಗಳು ಸೇರಿ ಒಟ್ಟು 46 ಅಕ್ಷರಗಳಿವೆ. ಎಲ್ಲ ವ್ಯಂಜನಗಳಿಗೆ ಕಾಗುಣಿತ ಮತ್ತು ಒತ್ತಕ್ಷರಗಳನ್ನು ಗುರುತಿಸಲಾಗಿದೆ. ಸೊನ್ನೆಯಿಂದ ಒಂಬತ್ತರವರೆಗಿನ ಅಂಕೆ, ಋತುಮಾನ ಆಧರಿಸಿ, 12 ತಿಂಗಳುಗಳನ್ನು ಬ್ಯಾರಿ ತಿಂಗಳುಗಳನ್ನು ಪರಿಚಯಿಸಲಾಗಿದೆ ಎಂದು ಪ್ರಕಟಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ರಜಿಸ್ಟ್ರಾರ್ ಪೂರ್ಣಿಮಾ, ಅನುಷ್ಠಾನ ಸಮಿತಿ ಸದಸ್ಯರು, ರೂಪಶ್ರೀ ವರ್ಕಾಡಿ, ಸಂಶೀರ್ ಬುಡೊಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.