ಮಂಗಳೂರು: ಬಲಿಪೂಜೆ, ನೊವೇನಾ ಪ್ರಾರ್ಥನೆ, ರಕ್ತದಾನ ಶಿಬಿರ ಮತ್ತಿತರ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಬಿಕರ್ನಕಟ್ಟೆಯ ಬಾಲಯೇಸು ಕ್ಷೇತ್ರದ ವಾರ್ಷಿಕ ಮಹೋತ್ಸವವು ಜ. 14 ಮತ್ತು 15ರಂದು ನಡೆಯಲಿದೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ನಿರ್ದೇಶಕ ಸ್ಪೀಫನ್ ಪಿರೇರಾ ಮಾಹಿತಿ ನೀಡಿ, ‘ಜ. 14ರಂದು ಸಂಜೆ 6ಕ್ಕೆ ಜೈಪುರ ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷ ಒಸ್ವಾಲ್ಡ್ ಜೋಸೆಫ್ ಲೂವಿಸ್ ಮಹೋತ್ಸವದ ಬಲಿಪೂಜೆ ನೆರವೇರಿಸುವರು. ಅದೇ ದಿನ ಬೆಳಿಗ್ಗೆ 10.30ಕ್ಕೆ ಅತ್ತೂರು– ಕಾರ್ಕಳ ಸೇಂಟ್ ಲಾರೆನ್ಸ್ ಮೈನರ್ ಬಾಸಿಲಿಕಾದ ರೆಕ್ಟರ್ ಆಲ್ಬನ್ ಡಿಸೋಜ ಬಲಿಪೂಜೆ, ಜ. 15ರಂದು ಬೆಳಿಗ್ಗೆ 10.30ಕ್ಕೆ ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಬಲಿಪೂಜೆ ನೆರವೇರಿಸುವರು. ಮಹೋತ್ಸವದ ಸಮಾರೋಪ ಪ್ರಾರ್ಥನಾ ವಿಧಿಯನ್ನು ಸಂಜೆ 6ಕ್ಕೆ ಕಾರ್ಮೆಲ್ ಸಭೆಯ ಸಹಾಯಕ ಪ್ರಾಂತ್ಯಾಧಿಕಾರಿ ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ನೆರವೇರಿಸುವರು’ ಎಂದರು.
ಎರಡು ದಿನಗಳ ಮಹೋತ್ಸವದ ಪ್ರಯುಕ್ತ ಜ. 5ರಿಂದ ಜ. 13ರವರೆಗೆ ನೊವೇನಾ ಪ್ರಾರ್ಥನೆ ನಡೆಯಲಿದೆ. ಜ. 14ರಂದು ಬೆಳಿಗ್ಗೆ 6ಕ್ಕೆ ಕೊಂಕಣಿ, 7.30ಕ್ಕೆ ಇಂಗ್ಲಿಷ್, 9ಕ್ಕೆ ಕೊಂಕಣಿ, ಮಧ್ಯಾಹ್ನ 1ಕ್ಕೆ ಕನ್ನಡದಲ್ಲಿ, ಜ. 15ರಂದು ಬೆಳಿಗ್ಗೆ 6.30, 7.30, 9ಕ್ಕೆ ಕೊಂಕಣಿಯಲ್ಲಿ ಹಾಗೂ 10.30ಕ್ಕೆ ಮಕ್ಕಳಿಗಾಗಿ ವಿಶೇಷ ಪೂಜೆ ಹಾಗೂ 1ಕ್ಕೆ ಮಲಯಾಳಂನಲ್ಲಿ ಪೂಜೆ ನಡೆಯಲಿದೆ ಎಂದು ತಿಳಿಸಿದರು.
ಮಹೋತ್ಸವದ ಅಂಗವಾಗಿ ಜ. 4ರಂದು ಸಂಜೆ 4.30ಕ್ಕೆ ಕುಲಶೇಖರದ ಹೋಲಿಕ್ರಾಸ್ ಚರ್ಚ್‍ನಿಂದ ಹೊರೆಕಾಣಿಕೆ ಮೆರವಣಿಗೆ ಹೊರಡುತ್ತದೆ. ನೊವೇನಾ ಹಾಗೂ ಹಬ್ಬದ ದಿನಗಳಲ್ಲಿ ಪ್ರತಿದಿನ ಅನ್ನಸಂತರ್ಪಣೆ ನಡೆಯಲಿದೆ. ಜ. 11 ಮತ್ತು 12ರಂದು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಬಾಲಯೇಸು ಕ್ಷೇತ್ರದ ಮುಖ್ಯ ಧರ್ಮಗುರು ಮೆಲ್ವಿನ್ ಡಿಕುನ್ಹಾ, ಪ್ರಮುಖರಾದ ದೀಪ್ ಫರ್ನಾಂಡಿಸ್, ರುಡಾಲ್ಫ್ ಡಿಸೋಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.