ಮಂಗಳೂರು: ಫೇಸ್‌ಬುಕ್‌ನ ‘ಫ್ಯಾಕ್ಟ್ ವಿಡ್’ (factvid@gmail.com) ಪುಟದಲ್ಲಿ ಹಿಂದೂ ದೇವತೆಗಳನ್ನು ಅವಹೇಳನ ಮಾಡುವಂತಹ ಚಿತ್ರಗಳನ್ನು ಪ್ರಕಟಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಉರ್ವದ ದಾಮೋದರ ಪ್ರಭು ಕಂಪೌಂಡ್ ನಿವಾಸಿಯಾಗಿರುವ ವಕೀಲ ತೀರ್ಥೇಶ್ ಪಿ. ದೂರು ನೀಡಿದ್ದು, ನಗರದ ಉರ್ವ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ನಾನು ಮನೆಯಲ್ಲಿ 2024ರ ಆ. 21ರಂದು ಸಂಜೆ 5ಕ್ಕೆ ಫೇಸ್‌ಬುಕ್ ಪುಟಗಳನ್ನು ನೋಡುತ್ತಿದ್ದೆ. ಫೇಸ್‌ಬುಕ್‌ನಲ್ಲಿರುವ ‘ಫ್ಯಾಕ್ಟ್ ವಿಡ್’ ಪುಟದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಭಗವಾನ್ ಶಿವ, ಕೃಷ್ಣ, ರಾಮ, ಗಣೇಶ ಮೊದಲಾದ ಹಿಂದೂ ದೇವರ ಚಿತ್ರಗಳನ್ನು ಮಹಿಳೆಯರ ಜೊತೆ ವರ್ತಿಸಿರುವಂತೆ, ಓಡಿಸುತ್ತಿರುವಂತೆ, ಕುಸ್ತಿ ಆಡಿಸುತ್ತಿರುವಂತೆ ವಿವಿಧ ಭಂಗಿಗಳಲ್ಲಿ ಅಶ್ಲೀಲವಾಗಿ ತೋರಿಸಲಾಗಿತ್ತು. ಅದಕ್ಕೆ ಹಿಂದೂಯೇತರರು ಅಶ್ಲೀಲವಾಗಿ ಕಮೆಂಟ್ ಹಾಕಿ ಹಿಂದೂಗಳ ಭಾವನೆಯನ್ನು ನೋಯಿಸಿದ್ದರು.’
‘ಹಿಂದೂ ದೇವರನ್ನು ವಿಡಂಬನೆ ಮಾಡಿ ಮಹಿಳೆಯರನ್ನು ಅಶ್ಲೀಲವಾಗಿ ಚಿತ್ರಿಸಿ, ಕೋಮುಸೂಕ್ಷ್ಮ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಿ, ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನವನ್ನು ಈ ಫೇಸ್‌ಬುಕ್ ಪುಟದಲ್ಲಿ ನಿರಂತರವಾಗಿ ಮಾಡಲಾಗುತ್ತಿದೆ. ‘ಫ್ಯಾಕ್ಟ್ ವಿಡ್’ ಪುಟವನ್ನು ನಿರ್ವಹಿಸುವ ಅಡ್ಮಿನ್ ವಿರುದ್ಧ ಹಾಗೂ ಈ ಪುಟದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ರೀತಿ ಕಮೆಂಟ್ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ತೀರ್ಥೇಶ್ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸಂಬಂಧ ಉರ್ವ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 299 (ಉದ್ದೇಶ ಪೂರ್ವಕವಾಗಿ ಧಾರ್ಮಿಕ ಭಾವನೆ ಕೆರಳಿಸುವುದು), ಸೆಕ್ಷನ್ 192 (ದೊಂಬಿ, ಗಲಭೆ ಎಬ್ಬಿಸಲು ಪ್ರಚೋದನೆ ನೀಡುವುದು) ಹಾಗೂ ಸೆಕ್ಷನ್ 353 (ಬೇರೆ ಬೇರೆ ಕೋಮುಗಳ ನಡುವೆ ದ್ವೇಷ ಹುಟ್ಟಿಸಲು ಸುಳ್ಳು ಮಾಹಿತಿ ಹಂಚಿಕೊಳ್ಳುವುದು) ಹಾಗೂ 2008ರ ಮಾಹಿತಿ ತಂತ್ರಜ್ಞಾನ ಕಾಯ್ದೆ ಯ ಸೆಕ್ಷನ್ 67ರ (ವಿದ್ಯನ್ಮಾನ ಮಾಧ್ಯಮಗಳಲ್ಲಿ ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.