ADVERTISEMENT

ಬಾಲ್ಯದ ಕಥನ: ಸಾಧನೆಯ ಮಥನ

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವರೊಂದಿಗೆ ಸಂವಾದ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 16:21 IST
Last Updated 26 ಮಾರ್ಚ್ 2024, 16:21 IST
ಡಾ. ಎಂ. ಮೋಹನ್‌ ಆಳ್ವ – ಪ್ರಜಾವಾಣಿ ಚಿತ್ರ
ಡಾ. ಎಂ. ಮೋಹನ್‌ ಆಳ್ವ – ಪ್ರಜಾವಾಣಿ ಚಿತ್ರ   

ಮಂಗಳೂರು: ‘ಬಾಲ್ಯದಿಂದಲೇ ಅಂತರ್ಗತವಾಗಿದ್ದ ಹುಚ್ಚು ಮನಸ್ಸಿನ ಹತ್ತು ಮುಖಗಳು ಜೀವನದುದ್ದಕ್ಕೂ ಬಹುಮುಖಿ ಆಸಕ್ತಿ ಬೆಳೆಸಿಕೊಳ್ಳಲು ಪ್ರೇರಣೆಯಾದವು. ಅವುಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ನನಗೆ ಹೆಚ್ಚು ಆಪ್ಯಾಯಮಾನವಾದವು’ ಎನ್ನುತ್ತ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತಮ್ಮ ಬದುಕಿನ ಸ್ಮರಣೀಯ ಸಂದರ್ಭಗಳನ್ನು ಮೆಲುಕು ಹಾಕಿದರು.

ಮಂಗಳವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂಗಳೂರು ಪ್ರೆಸ್‌ ಕ್ಲಬ್‌ನ ಗೌರವ ಅತಿಥಿಯಾಗಿ ಭಾಗವಹಿಸಿದ್ದ ಅವರು ಆತ್ಮಕಥನವನ್ನು ನಿರೂಪಿಸಿದರು.

‘ಕೃಷಿ ಕುಟುಂಬದಿಂದ ಬಂದ ನಾನು ಪ್ರಾಥಮಿಕ ಶಿಕ್ಷಣ ಪಡೆದಿದ್ದು ಕನ್ನಡ ಮಾಧ್ಯಮದಲ್ಲಿ. ಯಾವತ್ತಿಗೂ ನಾನು ಶೇ 40ರಿಂದ 50ಕ್ಕಿಂತ ಹೆಚ್ಚು ಅಂಕ ಪಡೆದವನಲ್ಲ. ಆದರೆ, ಆಗಿನಿಂದಲೇ ನನ್ನ ಹುಚ್ಚು ಮನಸ್ಸಿನ ಹತ್ತು ಮುಖಗಳಿಂದಾಗಿ ಹಲವಾರು ಮಜಲುಗಳಲ್ಲಿ ಯೋಚಿಸಲು ಕಲಿತೆ. ಕ್ರೀಡೆಯ ಆಸಕ್ತಿ ಹೋರಾಟ ಮನೋಭಾವ ಕಲಿಸಿದರೆ, ಸೌಂದರ್ಯ ಪ್ರಜ್ಞೆ ಕಲೆಯ ಆಸ್ವಾದನೆಯನ್ನು ಬೆಳೆಸಿತು. ಇವೇ ಇಂದು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಫಲಿತಗೊಂಡಿವೆ. ಕ್ರೀಡೆ, ಕಲೆಗೆ ಪ್ರೋತ್ಸಾಹ, ಆಳ್ವಾಸ್ ವಿರಾಸತ್‌ನಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇನೆ. ವರ್ಷ 72 ಆದರೂ, ಹುಚ್ಚು ಮನಸ್ಸು ನನ್ನನ್ನು ಬಿಟ್ಟಿಲ್ಲ’ ಎಂದು ಮುಗುಳ್ನಗುತ್ತಲೇ ಹೇಳಿದರು. 

ADVERTISEMENT

‘ಎಂದಿಗೂ ರಾಜಕೀಯ ಪ್ರವೇಶಕ್ಕೆ ಆಸೆ ಪಟ್ಟಿಲ್ಲ, ನನಗೆ ಆಸಕ್ತಿಯೂ ಇಲ್ಲ. ಸರ್ವ ಧರ್ಮ, ಭಾಷೆಗಳನ್ನು ಗೌರವಿಸಿ ಸಾಮರಸ್ಯದ ಬದುಕಿಗೆ ಒತ್ತು ನೀಡಿದ್ದೇನೆ. ಎನ್‌ಎಸ್‌ಎಸ್ ಚಟುವಟಿಕೆ, ಕ್ರೀಡಾಪಟುವಾಗಿ ನಾಯಕತ್ವ ವಹಿಸಿದ್ದೇನೆ. 18ನೇ ವಯಸ್ಸಿನಲ್ಲಿ ನೃತ್ಯ ಕಲಿಕೆ ಪ್ರಾರಂಭಿಸಿ, ಹಲವಾರು ಕಡೆಗಳಲ್ಲಿ ಪ್ರದರ್ಶನವನ್ನೂ ನೀಡಿದ್ದೇನೆ. ವಿವಿಧ ವಿಷಯಗಳ ಅಭ್ಯಾಸ ಮಾಡಿ, ಕೊನೆಗೆ ವೈದ್ಯಕೀಯ ಶಿಕ್ಷಣ ಪಡೆದು, 27ನೇ ವಯಸ್ಸಿಗೆ ಪದವಿ ಪೂರ್ಣಗೊಳಿಸಿದೆ. ಮೂಡುಬಿದಿರೆಯಲ್ಲಿ ಆಸ್ಪತ್ರೆ ಆರಂಭಿಸಿ, ನಂತರ 1995ರಲ್ಲಿ ಶಿಕ್ಷಣ ಕ್ಷೇತ್ರ ನನ್ನನ್ನು ಸೆಳೆಯಿತು. 25 ಮಕ್ಕಳಿಂದ ಪ್ರಾರಂಭವಾದ ಸಂಸ್ಥೆಯಲ್ಲಿ ಈಗ 22 ಸಾವಿರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ’ ಎಂದರು.

‘ನಾಲ್ಕನೇ ಕ್ಲಾಸಿನಿಂದ ಹಾಸ್ಟೆಲ್‌ನಲ್ಲಿ ಉಳಿದು ಶಿಕ್ಷಣ ಪಡೆದವನು. ಈ ಕಾರಣಕ್ಕೆ ನಮ್ಮ ವಿದ್ಯಾರ್ಥಿಗಳು ಸಂಸ್ಥೆಯಲ್ಲೇ ಇದ್ದು ಉತ್ತಮ ಶಿಕ್ಷಣ ಪಡೆಯುವಂತಾಗಲು ಆಳ್ವಾಸ್‌ನಲ್ಲಿ ಹಾಸ್ಟೆಲ್ ಸಹಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಸಾಲ ಇದ್ದರೆ ಮನುಷ್ಯ ಕ್ರಿಯಾಶೀಲನಾಗಿರುತ್ತಾನೆ, ಇಲ್ಲದಿದ್ದರೆ ಹೆಬ್ಬಾವಿನಂತೆ ಆಗುತ್ತೇವೆ. ನಾನು ₹250 ಕೋಟಿ ಸಾಲ ಇರುವ ಧನಿಕ’ ಎಂದು ಮಾರ್ಮಿಕವಾಗಿ ಹೇಳಿದರು.

‘ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ನಾನು ಖಾತೆ ಹೊಂದಿಲ್ಲ. ನನಗೆ ಅವುಗಳಲ್ಲಿ ಆಸಕ್ತಿಯೂ ಇಲ್ಲ. ಪ್ರತಿನಿತ್ಯ ಒಂದು ತಾಸು ದಿನಪತ್ರಿಕೆಗಳ ಓದು, ಒಡನಾಡಿಗಳಿಂದ ಕೇಳಿ ತಿಳಿದುಕೊಳ್ಳುವ ಸಂಗತಿಗಳ ಮೂಲಕವೇ ನಾನು ಅಪ್‌ಡೇಟ್ ಆಗುತ್ತೇನೆ’ ಎಂದು ಹೇಳಿದರು.

ಮಂಗಳೂರು ಟುಡೆ ಮಾಸ ಪತ್ರಿಕೆಯ ಸಂಪಾದಕ ವಿ.ಯು. ಜಾರ್ಜ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ರಾಮಕೃಷ್ಣ ಆರ್, ಇಬ್ರಾಹಿಂ ಅಡ್ಕಸ್ಥಳ ಇದ್ದರು. ಆರ್‌.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.