ADVERTISEMENT

84 ಸಾವಿರ ಕೃತಕ ಕಾಲು ದಾನ

ವೆನ್ಲಾಕ್ ಆಸ್ಪತ್ರೆಯ ಲಯನ್ಸ್ ಲಿಂಬ್ ಸೆಂಟರ್‌ನ ಅಧ್ಯಕ್ಷ ಡಾ. ಶಾಂತಾರಾಮ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 6:18 IST
Last Updated 29 ಜೂನ್ 2024, 6:18 IST
 ಡಾ.ಶಾಂತರಾಮ ಶೆಟ್ಟಿ ಹಾಗೂ ಡಾ. ಕೆ.ಆರ್.ಕಾಮತ್ ಲಯನ್ಸ್ ಲಿಂಬ್ ಸೆಂಟರ್‌ನಲ್ಲಿ ಸಿದ್ಧವಾಗುವಕೃತಕ ಕಾಲುಗಳನ್ನು ಪ್ರದರ್ಶಿಸಿದರು – ಪ್ರಜಾವಾಣಿ ಚಿತ್ರ 
 ಡಾ.ಶಾಂತರಾಮ ಶೆಟ್ಟಿ ಹಾಗೂ ಡಾ. ಕೆ.ಆರ್.ಕಾಮತ್ ಲಯನ್ಸ್ ಲಿಂಬ್ ಸೆಂಟರ್‌ನಲ್ಲಿ ಸಿದ್ಧವಾಗುವಕೃತಕ ಕಾಲುಗಳನ್ನು ಪ್ರದರ್ಶಿಸಿದರು – ಪ್ರಜಾವಾಣಿ ಚಿತ್ರ    

ಮಂಗಳೂರು: ‘ಬೈಕಂಪಾಡಿಯ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡು ಹತಾಶರಾಗಿದ್ದರು. ಎರಡು ಕೃತಕ ಕಾಲುಗಳು ಅವರ ಬದುಕನ್ನು ಹಸನಾಗಿಸಿವೆ. ಬೀಡಿ ಕಟ್ಟುವ ಉದ್ಯೋಗವೇ ಅವರ ಜೀವನಕ್ಕೆ ಆಸರೆ. ಈಗಲೂ ಅವರು ಕೃತಕ ಕಾಲಿನಲ್ಲೇ ಸಹಜವಾಗಿ ಜೀವನ ನಡೆಸುತ್ತಿದ್ದಾರೆ..’

28 ವರ್ಷಗಳ ಹಿಂದೆ ನಡೆದ ಈ ಘಟನೆ ಇನ್ನೂ ನೆನಪಿನಿಂದ ಮಾಸಿಲ್ಲ, ಅಪಘಾತ ಅಥವಾ ಇನ್ನಿತರ ಕಾರಣಗಳಿಂದ ಕಾಲನ್ನು ಕಳೆದುಕೊಂಡಿದ್ದ ಇಂತಹ ಸಾವಿರಾರು ಜನರು ಕೃತಕ ಕಾಲನ್ನು ಅಳವಡಿಸಿಕೊಂಡು ಸ್ವತಂತ್ರ ಬದುಕು ನಡೆಸುತ್ತಿರುವುದನ್ನು ಕಂಡಾಗ ಸಾರ್ಥಕ ಭಾವ ಮೂಡುತ್ತದೆ ಎಂದು ಉದಾಹರಣೆಯೊಂದಿಗೆ ಮಾತಿಗಿಳಿದರು ವೆನ್ಲಾಕ್ ಆಸ್ಪತ್ರೆಯ ಲಯನ್ಸ್ ಲಿಂಬ್ ಸೆಂಟರ್‌ನ ಅಧ್ಯಕ್ಷರಾಗಿರುವ ಮೂಳೆ ತಜ್ಞ ಡಾ. ಶಾಂತಾರಾಮ ಶೆಟ್ಟಿ.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಶುಕ್ರವಾರ ಇಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಲಯನ್ಸ್ ಲಿಂಬ್ ಸೆಂಟರ್‌ 50 ವರ್ಷಗಳನ್ನು ಪೂರೈಸುತ್ತಿದ್ದು, ಈವರೆಗೆ ಒಟ್ಟು 84 ಸಾವಿರ ಕೃತಕ ಕಾಲು ಸೇರಿದಂತೆ ವಿವಿಧ ಅಂಗಾಂಗಗಳನ್ನು ಅಗತ್ಯವುಳ್ಳವರಿಗೆ ನೀಡಲಾಗಿದೆ. ಶೇ 80ರಷ್ಟು ದಾನಿಗಳು, ಸಂಘ–ಸಂಸ್ಥೆಗಳ ನೆರವಿನಿಂದ ಉಚಿತವಾಗಿ ವಿತರಿಸಲಾಗಿದೆ. ಮೂರು ಮಾದರಿಯ ಕೃತಕ ಕಾಲುಗಳಿದ್ದು, ಮೊದಲು ಜೈಪುರದಲ್ಲಿ ಸಿದ್ಧಪಡಿಸಿದ ಕೃತಕ ಕಾಲುಗಳನ್ನು ತಂದು ರೋಗಿಗಳಿಗೆ ನೀಡಲಾಗುತ್ತಿತ್ತು. ಪ್ರಸ್ತುತ ಲಿಂಬ್ ಸೆಂಟರ್‌ನಲ್ಲಿ ಸಿದ್ಧಪಡಿಸಲಾಗುತ್ತದೆ’ ಎಂದರು.

ADVERTISEMENT

ಕಾಲು ಕಳೆದುಕೊಂಡ ಹಲವಾರು ಬಡವರಿಗೆ ಕೃತಕ ಕಾಲುಗಳ ಅಗತ್ಯ ಇರುತ್ತದೆ. ಹೀಗಾಗಿ, ಬಹು ಕಡೆಗಳಲ್ಲಿ ಒಬ್ಬನೇ ವ್ಯಕ್ತಿ ಸೌಲಭ್ಯ ಪಡೆದುಕೊಳ್ಳುವ ಮೂಲಕ ಉಚಿತ ಸೇವೆಯನ್ನು ದುರುಪಯೋಗ ಮಾಡಿಕೊಳ್ಳಬಾರದು. ಅಪ್ಪರ್ ಲಿಂಬ್ (ದೇಹದ ಮೇಲ್ಭಾಗದ ಕೃತಕ ಅವಯವ) ಸಿದ್ಧಪಡಿಸಿ ಅಗತ್ಯವುಳ್ಳವರಿಗೆ ನೀಡುವ ಕನಸಿದೆ. ಆದರೆ, ತಂತ್ರಜ್ಞರ ಕೊರತೆ ಇದ್ದು, ತರಬೇತಿ ಹೊಂದಿದ ತಂತ್ರಜ್ಞರ ಸಹಕಾರ ದೊರೆತರೆ ಈ ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಿದರು. 

ಪ್ರೆಸ್‌ಕ್ಲಬ್‌ನಿಂದ ವರ್ಷಕ್ಕೆ ಇಬ್ಬರು ವ್ಯಕ್ತಿಗಳಿಗೆ ಕೃತಕ ಕಾಲು ಒದಗಿಸಲು ನೆರವು ನೀಡಲಾಗುವುದು ಎಂದು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಪ್ರಕಟಿಸಿದರು. 

ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ವೆನ್ಲಾಕ್ ಆಸ್ಪತ್ರೆಯ ಲಯನ್ಸ್ ಲಿಂಬ್ ಸೆಂಟರ್ ಕೋಶಾಧಿಕಾರಿ ಡಾ. ಕೆ.ಆರ್.ಕಾಮತ್ ಇದ್ದರು. ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ಜಿತೇಂದ್ರ ಕುಂದೇಶ್ವರ ವಂದಿಸಿದರು.

Cut-off box - ‘ವ್ಯಾಯಾಮದ ಕೊರತೆ’ ಇತ್ತೀಚಿನ ದಿನಗಳಲ್ಲಿ 30ರಿಂದ 40ರ ಪ್ರಾಯದವರಿಗೆ ಕಾಲುಗಂಟು ನೋವು ಕಾಣಿಸಿಕೊಳ್ಳುತ್ತಿದೆ. ಬಹುಹೊತ್ತು ಏಕಭಂಗಿಯಲ್ಲಿ ಕುಳಿತು ಕೆಲಸ ಮಾಡುವುದು ದೇಹಕ್ಕೆ ವ್ಯಾಯಾಮದ ಕೊರತೆ ಆಹಾರ ಕ್ರಮದಲ್ಲಿ ವ್ಯತ್ಯಾಸ ಇದಕ್ಕೆ ಪ್ರಮುಖ ಕಾರಣವಾಗಿದೆ. ಧೂಮಪಾನ ದೇಹಕ್ಕೆ ಅತಿಯಾದ ಹಾನಿ ಮಾಡುತ್ತದೆ ಎಂದು ಡಾ. ಶಾಂತಾರಾಮ ಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.