ADVERTISEMENT

ಜೂನ್‌ 11ರಂದು ಆಟದ ದಿನ ಘೋಷಣೆಗೆ ಅಂಗೀಕಾರ

ಹಕ್ಕೊತ್ತಾಯ ಮಂಡನೆಯಲ್ಲಿ ಉಡುಪಿ, ವಿಜಯನಗರ ಜಿಲ್ಲೆ ಮಕ್ಕಳು: ಸಿಡಬ್ಲ್ಯುಸಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 16:01 IST
Last Updated 4 ಏಪ್ರಿಲ್ 2024, 16:01 IST

ಮಂಗಳೂರು: ಜಾಗತಿಕ ಮಟ್ಟದಲ್ಲಿ ನಡೆದ ಆನ್‌ಲೈನ್ ಸಮಾಲೋಚನೆ, ಗುಂಪು ಚರ್ಚೆ ಪರಿಣಾಮವಾಗಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಜೂನ್ 11 ಅನ್ನು ಅಂತರರಾಷ್ಟ್ರೀಯ ಆಟದ ದಿನವಾಗಿ ಅಂಗೀಕರಿಸಿದೆ ಎಂದು ದಿ ಕನ್ಸರ್ನ್ಡ್‌ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆ (ಸಿಡಬ್ಲ್ಯುಸಿ) ತಿಳಿಸಿದೆ.

ಮಕ್ಕಳ ಜೀವನದಲ್ಲಿ ಆಟದ ಮಹತ್ವವನ್ನು ಗುರುತಿಸುವ ಗಮನಾರ್ಹ ಹೆಜ್ಜೆ ಇದಾಗಿದೆ. ಈ ಘೋಷಣೆಯ ಹಿಂದೆ ಜಗತ್ತಿನ ವಿವಿಧೆಡೆಯ 10 ಸಾವಿರಕ್ಕೂ ಹೆಚ್ಚು ಮಕ್ಕಳು ಹಲವಾರು ಚರ್ಚೆಗಳಲ್ಲಿ ಭಾಗವಹಿಸಿ ವಿಷಯ ಮಂಡಿಸಿದ್ದರು. ಅವರ ಪರಿಣಾಮಕಾರಿ ವಿಷಯ ಮಂಡನೆಯ ಪರಿಣಾಮವಾಗಿ ಈ ದಿನ ಘೋಷಣೆಗೆ ಅನುಮೋದನೆ ದೊರೆತಿದೆ. ಈ ಪ್ರಕ್ರಿಯೆಯಲ್ಲಿ ಕರ್ನಾಟಕದ ಉಡುಪಿ ಮತ್ತು ವಿಜಯನಗರ ಜಿಲ್ಲೆಗಳ 460ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

‘ಎಲ್ಲ ಮಕ್ಕಳ ಸಂಘ ಹಾಗೂ ಭೀಮ ಸಂಘದ ಪ್ರತಿನಿಧಿಗಳಾಗಿ ಅಂತರರಾಷ್ಟ್ರೀಯ ಮಟ್ಟದ ಮಕ್ಕಳು ಮತ್ತು ಯುವ ಜನರ ಸಲಹಾ ಗುಂಪಿನ ಸದಸ್ಯರಾಗಿ ಉಡುಪಿ ನಾಡ ಮಕ್ಕಳ ಸಂಘದ ಶ್ರೀರಕ್ಷಾ ಮತ್ತು ತನುಷ್, ಉಳ್ಳೂರು ಕಾಮನಬಿಲ್ಲು ಮಕ್ಕಳ ಸಂಘದ ನಿಶ್ಮಿತಾ, ಹಾಲಾಡಿ ಮಕ್ಕಳ ಸಂಘದ ಅಂಜಲಿ, ವಿಜಯನಗರ ಭೀಮ ಸಂಘದ ಮಹೇಶ್ವರಿ ಪಾಲ್ಗೊಂಡಿದ್ದರು. ನಮ್ಮ ಸಂಸ್ಥೆಯ ಮಾರ್ಗದರ್ಶನ ಹಾಗೂ ಬೆಂಬಲದೊಂದಿಗೆ ಮಕ್ಕಳು ಸಮರ್ಥವಾಗಿ ಹಕ್ಕೊತ್ತಾಯ ಮಂಡಿಸಿದ್ದರು. ಆಟವು ಮಕ್ಕಳ ಸಮಗ್ರ ಅಭಿವೃದ್ಧಿಗೆ ಮೂಲ ಅಗತ್ಯವಾಗಿದೆ ಎಂಬುದನ್ನು ಮಕ್ಕಳು ನಿರೂಪಿಸಿದ್ದರು’ ಎಂದು ಸಿಡಬ್ಲ್ಯುಸಿ ಸಂಯೋಜಕಿ ಕೃಪಾ ಎಂ.ಎಂ. ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.