ADVERTISEMENT

ದುಡಿಮೆಯ ಅನುಭವ ಗೆಲುವಿಗೆ ರಹದಾರಿ: ಕಿಶೋರ್‌ಕುಮಾರ್ ಸಂದರ್ಶನ

ಸಂಧ್ಯಾ ಹೆಗಡೆ
Published 19 ಅಕ್ಟೋಬರ್ 2024, 7:45 IST
Last Updated 19 ಅಕ್ಟೋಬರ್ 2024, 7:45 IST
<div class="paragraphs"><p>ಕಿಶೋರ್‌ಕುಮಾರ್</p></div>

ಕಿಶೋರ್‌ಕುಮಾರ್

   

ಮಂಗಳೂರು: ಆರ್‌ಎಸ್‌ಎಸ್‌ ಶಾಖೆಯ ಮುಖ್ಯ ತರಬೇತುದಾರರಾಗಿ, ಎಬಿವಿಪಿ ಕಾರ್ಯಕರ್ತರಾಗಿ, ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿರುವ ಪುತ್ತೂರಿನ ಕಿಶೋರ್‌ಕುಮಾರ್ ಬೊಟ್ಯಾಡಿ, ವಿಧಾನ ಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 

ಉಡುಪಿ– ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಕ್ಷೇತ್ರದಲ್ಲಿ ಮತದಾರರನ್ನು ಭೇಟಿಯಾಗಿ ಮತಯಾಚಿಸುತ್ತಿರುವ ಅವರು, ಬಿಡುವಿಲ್ಲದ ಸಂಚಾರದ ನಡುವೆ ‘ಪ್ರಜಾವಾಣಿ’ ಜೊತೆ ಮಾತುಕತೆ ನಡೆಸಿದರು.

ADVERTISEMENT

ವಿಧಾನ ಪರಿಷತ್‌ ಚುನಾವಣೆಯಲ್ಲಿ ಜನಪ್ರತಿನಿಧಿಗಳೇ ಮತದಾರರು. ಪ್ರತಿಯೊಬ್ಬರ ಭೇಟಿಗೆ ಯಾವ ರೀತಿ ಯೋಜನೆ ರೂಪಿಸಿಕೊಂಡಿದ್ದೀರಿ?

ನನ್ನೊಬ್ಬನಿಗೇ ಎಲ್ಲ ಮತದಾರನ್ನು ಭೇಟಿಯಾಗಲು ಕಷ್ಟಸಾಧ್ಯ. ಸದೃಢವಾಗಿರುವ ಪಕ್ಷದಲ್ಲಿ ಗ್ರಾಮ ಮಟ್ಟದಿಂದ ಜಿಲ್ಲಾ ಘಟಕವರೆಗೆ ಎಲ್ಲರ ಪರಿಶ್ರಮ, ಮಹಾಶಕ್ತಿ ಕೇಂದ್ರದ ಕಾರ್ಯಚಟುವಟಿಕೆಗಳ ಮೂಲಕ ಪ್ರತಿ ಮತದಾರನನ್ನು ತಲುಪಲು ಸಾಧ್ಯವಾಗಿದೆ. 

ನೀವು ಆಯ್ಕೆಯಾದರೆ ಮೇಲ್ಮನೆಯ ಒಬ್ಬ ಸಮರ್ಥ ಜನಪ್ರತಿನಿಧಿಯಾಗಲು ಏನೆಲ್ಲ ಯೋಜನೆ ರೂಪಿಸಿಕೊಂಡಿರುವಿರಿ?

ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಮೊದಲ ಬಾರಿಗೆ ಆಗಿರಬಹುದು, ಆದರೆ, ಅನೇಕ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ದುಡಿದಿರುವ ಅನುಭವ ನನ್ನೊಂದಿಗಿದೆ. ಮೂಲತಃ ನಾನು ಕೃಷಿಕ, ಕೃಷಿಕನೊಬ್ಬನ ಮಗ. ಸಮಾಜದ ಕೆಲಸ ನಿಭಾಯಿಸುವಾಗ ಪ್ರತಿಯೊಬ್ಬರ ಕಷ್ಟಕ್ಕೆ ಸ್ಪಂದಿಸುವ ಪಾಠವನ್ನು ಪರಿವಾರದ ಸಂಘಟನೆಗಳು ಕಲಿಸಿವೆ. ‘ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ’ ಎಂಬುದನ್ನು ಬದುಕಿನಲ್ಲಿ ರೂಢಿಸಿಕೊಂಡಿದ್ದೇನೆ. ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಲು ಪಕ್ಷ ನನಗೆ ಕಲಿಸಿದೆ. ಅನುಭವಿ ಕೋಟ ಶ್ರೀನಿವಾಸ ಪೂಜಾರಿ ಅವರ ಮಾರ್ಗದರ್ಶನ ಪಡೆಯುತ್ತೇನೆ.

ಯಾಕಾಗಿ ನಿಮ್ಮನ್ನು ಆಯ್ಕೆ ಮಾಡಬೇಕು ಅನ್ನುತ್ತೀರಿ?

ಜನರ ಧ್ವನಿಯಾಗಿ ಸಮರ್ಥವಾಗಿ ಕೆಲಸ ಮಾಡಲು ಪಕ್ಷ ಯುವಕನೊಬ್ಬನಿಗೆ ಅವಕಾಶ ನೀಡಿದೆ. ಆ ಕಾರಣಕ್ಕೆ ನನ್ನನ್ನು ಆಯ್ಕೆ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ.

ನಿಮಗೆ ಟಿಕೆಟ್ ದೊರೆಯುವಲ್ಲಿ ಜಾತಿ ಲೆಕ್ಕಾಚಾರ ಕೆಲಸ ಮಾಡಿದೆಯಾ? 

ಬಿಜೆಪಿಯಲ್ಲಿ ಜಾತಿ ಎಂಬುದು ಇಲ್ಲ. ಜಾತಿ ಬಲ ಇಲ್ಲದವನಿಗೆ ಟಿಕೆಟ್ ಸಿಗಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಪಕ್ಷವನ್ನು ತಾಯಿ ಸಮಾನವಾಗಿ ಕಂಡಿದ್ದೇನೆ. ಹಿಂದುತ್ವದ ಆಧಾರದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ. ಹಿಂದುತ್ವ ಇರುವುದು ಬಿಜೆಪಿಯಲ್ಲಿ ಮಾತ್ರ.

ಕ್ಷೇತ್ರ ವ್ಯಾಪ್ತಿಯಲ್ಲಿ ನೀವು ಗುರುತಿಸಿರುವ ಸಮಸ್ಯೆಗಳು ಏನು?

ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಪಂಚಾಯತ್‌ ರಾಜ್ ವ್ಯವಸ್ಥೆಗೆ ಶಕ್ತಿ ತುಂಬುವ ಕೆಲಸ ಆಗಿದೆ. ಜಲ್‌ಜೀವನ್, ಪ್ರಧಾನಮಂತ್ರಿ ಆವಾಸ್ ಯೋಜನೆ, ಗ್ರಾಮೀಣ ಸಡಕ್ ಸೇರಿದಂತೆ ಅನೇಕ ಯೋಜನೆಗಳು ಜಾರಿಗೊಂಡಿವೆ. ಎಲ್ಲ ಜನಪರ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಪ್ರಯತ್ನಿಸುತ್ತೇನೆ.

ಪಂಚಾಯತ್ ರಾಜ್ ವ್ಯವಸ್ಥೆ ನಿಮಗೆ ಹೊಸತು, ಅನುಭವದ ಕೊರತೆ ಇದೆ ಎಂದು ಕಾಂಗ್ರೆಸ್ಸಿಗರು ಆರೋಪಿಸುತ್ತಾರೆ...

ಚುನಾವಣೆ ಬಂದಾಗ ಇಂತಹ ಮಾತು ಸಹಜ. 30 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಹೊಸ ಹೊಣೆಗಾರಿಕೆ ಕಷ್ಟ ಆಗಲಾರದು. ಆಗಲಿಕ್ಕಿಲ್ಲ. ಕಾಂಗ್ರೆಸ್‌ನವರೂ ಶಹಭಾಸ್ ಎನ್ನುವಂತೆ ಕೆಲಸ ಮಾಡಿ ತೋರಿಸುತ್ತೇನೆ.

ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತ ಇದೆ. ವಿರೋಧ ಪಕ್ಷದಲ್ಲಿರುವ ಬಿಜೆಪಿಯನ್ನು ಮತದಾರರು ಬೆಂಬಲಿಸಬಹುದಾ?

ಪಕ್ಷ ಬೆಂಬಲಿತ ಜನಪ್ರತಿನಿಧಿಗಳೇ ಮತದಾರರು. ಕಾಂಗ್ರೆಸ್‌ ಬೆಂಬಲಿತರಿಗೂ ಈಗ ಕಾಂಗ್ರೆಸ್‌ ಬೇಡವೆಂಬ ಭಾವನೆ ಮೂಡಿದೆ. ಹೀಗಾಗಿ, ಹೆಚ್ಚು ಮತ ಪಡೆಯುವ ವಿಶ್ವಾಸವಿದೆ.

ವೈಯಕ್ತಿಕ ವಿವರ

ಹೆಸರು: ಕಿಶೋರ್‌ಕುಮಾರ್ ಬೊಟ್ಯಾಡಿ

ವಯಸ್ಸು: 45 ವರ್ಷ

ಶಿಕ್ಷಣ: ಎಂ.ಎ (ರಾಜ್ಯಶಾಸ್ತ್ರ)

ಪತ್ನಿ: ಪ್ರೀತಿ

ಮಕ್ಕಳು: ಮಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.