ಮಂಗಳೂರು: ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆ (ಇಸ್ಕಾನ್) ನಗರದಲ್ಲಿ ಆಯೋಜಿಸಿರುವ ಶ್ರೀ ಕೃಷ್ಣ–ಬಲರಾಮ ರಥಯಾತ್ರೆ ಇದೇ 10ರಂದು ಸಂಜೆ ನಡೆಯಲಿದೆ.
ಕೊಡಿಯಾಲ್‌ಬೈಲ್‌ನಲ್ಲಿ ಪಿವಿಎಸ್ ಕಲಾಕುಂಜದಲ್ಲಿರುವ ಇಸ್ಕಾನ್ ಆವರಣದಲ್ಲಿ ಅಂದು ಸಂಜೆ 4.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ನಂತರ ರಥಯಾತ್ರೆ ಆರಂಭವಾಗಲಿದೆ. ಶ್ರೀಕೃಷ್ಣ–ಬಲರಾಮ ಮೂರ್ತಿಗಳನ್ನು ಹೊತ್ತ, ಪುಷ್ಪಾಲಂಕೃತ ರಥಕ್ಕೆ ಪ್ರತಿ 500 ಮೀಟರ್‌ನಲ್ಲಿ ಹೂ–ಹಣ್ಣು ನೈವೇದ್ಯ ಅರ್ಪಿಸಲು ಅವಕಾಶ ಇದೆ ಎಂದು ಮಂಗಳೂರು ಇಸ್ಕಾನ್‌ನ ಅಧ್ಯಕ್ಷ ಗುಣಾಕರ ರಾಮದಾಸ್ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಥವು ಶಾರದಾ ವಿದ್ಯಾಲಯ ರಸ್ತೆ, ನವಭಾರತ್ ವೃತ್ತ, ಮಹಾಮಾಯಿ ದೇವಸ್ಥಾನ ರಸ್ತೆ, ರಥಬೀದಿ, ಬಿಇಎಂ ಶಾಲೆ ರಸ್ತೆ, ಕುದ್ರೋಳಿ ದೇವಸ್ಥಾನ, ಮಣ್ಣಗುಡ್ಡ ರಸ್ತೆ, ಬಲ್ಲಾಳ್ ಬಾಗ್ ಮೂಲಕ ಇಸ್ಕಾನ್ ಆವರಣಕ್ಕೆ ತಲುಪಲಿದೆ ಎಂದರು.
ಕಾಷ್ಠದಿಂದ ತಯಾರಿಸಿದ ರಥವನ್ನು ಬೆಂಗಳೂರು ಇಸ್ಕಾನ್‌ನಿಂದ ತರಲಾಗುವುದು. ರಥಯಾತ್ರೆಗೆ ಹರೇಕೃಷ್ಣ ಹರೇರಾಮ ಜಪ, ಭಜನೆ, ಸಂಗೀತ, ವಾದ್ಯಮೇಳ ಶೋಭೆ ತುಂಬಲಿದ್ದು ಸಂಜೆ 7.30ಕ್ಕೆ ಮುಗಿಯಲಿದೆ. ನಂತರ ಸಂಕೀರ್ತನೆ ಮತ್ತು ಮಹಾ ಮಂಗಳಾರತಿ ನಡೆಯಲಿದೆ. 5 ಸಾವಿರದಷ್ಟು ಮಂದಿಗೆ ಪ್ರಸಾದ ವಿತರಣೆ ಇರುತ್ತದೆ ಎಂದು ಅವರು ತಿಳಿಸಿದರು.
ಸಂಜೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ, ಮಹಾನಗರ ಪಾಲಿಕೆ ಸದಸ್ಯೆ ಜಯಶ್ರೀ ಕುಡ್ವ ಹಾಗೂ ಉದ್ಯಮಿ ಅಭಿನವ್ ಬನ್ಸಾಲ್ ಪಾಲ್ಗೊಳ್ಳುವರು ಎಂದು ಅವರು ವಿವರಿಸಿದರು.
ಜೊತೆ ಕಾರ್ಯದರ್ಶಿಗಳಾದ ರಾಧಾ ವಲ್ಲಭ ದಾಸ, ಸುಂದರ ಗೌರ ದಾಸ ಹಾಗೂ ಮಾಧ್ಯಮ ಸಲಹೆಗಾರ ಎಂ.ವಿ.ಮಲ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.