ಮೂಡುಬಿದಿರೆ: ದ್ವಿತೀಯ ಪಿಯುಸಿ ಇತಿಹಾಸ ಪಠ್ಯದಲ್ಲಿ ಜೈನ ಧರ್ಮದ ಬಗೆಗಿನ ವಾಸ್ತವ ವಿಚಾರವನ್ನು ತಿರುಚಿ ಅವಮಾನ ಮಾಡಲಾಗಿದೆ ಎಂಬ ಜೈನಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಅವರ ಆಕ್ಷೇಪಕ್ಕೆ ಸ್ಪಂದಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್, ಆಗಿರುವ ತಪ್ಪನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.
‘ಇತಿಹಾಸ ಪಠ್ಯದ 33, 34 ಮತ್ತು 35ನೇ ಪುಟದ ಪಂಚಶೀಲ, ಪಂಚತತ್ವದಲ್ಲಿ ಅನುವ್ರತ ಎಂದಾಗಬೇಕು. ಪಠ್ಯದಲ್ಲಿ ಮಹಾವೀರರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದಿದೆ. ಶ್ವೇತಾಂಬರ ಪರಂಪರೆಯ ವಿಚಾರಗಳಿವೆ. ದಿಗಂಬರ ಪ್ರಾಚೀನ ಪರಂಪರೆಯಾಗಿದ್ದು, ಅದರ ಪ್ರಕಾರ ಮಹಾವೀರರು ಬಾಲಬ್ರಹ್ಮಚಾರಿಯಾಗಿದ್ದರು. ಶಾಲಿವಾಹನಶಕೆ ಎಂದು ಮುದ್ರಿಸಲಾಗಿದ್ದು, ಅದು ಕ್ರಿಸ್ತಪೂರ್ವ ಎಂದಾಗಬೇಕು. ಜೈನ ಧರ್ಮ ಕೋಸಲ, ವಂಗ ಮತ್ತು ಮಗಧದಲ್ಲಿ ಮಾತ್ರ ನೆಲೆಯಾಗಿತ್ತು ಎಂದು ಕೂಡ ಉಲ್ಲೇಖಿಸಲಾಗಿದೆ. ಇದು ಕೂಡ ತಪ್ಪು ಮಾಹಿತಿಯಾಗಿದೆ. ಈ ಲೋಪ ಸರಿಪಡಿಸಿ, ಶೈಕ್ಷಣಿಕ ವರ್ಷಾರಂಭದಲ್ಲಿ ಪರಿಷ್ಕೃತ ಪಠ್ಯವನ್ನು ಪ್ರಕಟಿಸುವಂತೆ’ ಸ್ವಾಮೀಜಿ ಪತ್ರ ಬರೆದಿದ್ದರು.
ಮಂಗಳವಾರ ಸ್ವಾಮೀಜಿಗೆ ಕರೆ ಮಾಡಿ ಮಾತನಾಡಿದ ಸಚಿವ ಸುರೇಶ್‌ಕುಮಾರ್, ‘ಪಠ್ಯದಲ್ಲಿ ಆಗಿರುವ ಪ್ರಮಾದಗಳನ್ನು ಸರಿಪಡಿಸಿ, ಸೂಕ್ತ ತಿದ್ದುಪಡಿಯೊಂದಿಗೆ ಪರಿಷ್ಕೃತ ಪಠ್ಯಪುಸ್ತಕದ ಮರುಮುದ್ರಣಕ್ಕೆ ಒಪ್ಪಿಗೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.