ADVERTISEMENT

ಪ್ರೇಕ್ಷಕರ ಕಿವಿ ಇಂಪಾಗಿಸಿದ ರಂಗಗೀತೆಗಳು 

ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು
Published 24 ಡಿಸೆಂಬರ್ 2022, 6:36 IST
Last Updated 24 ಡಿಸೆಂಬರ್ 2022, 6:36 IST
ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಶುಕ್ರವಾರ ಚಂದ್ರಶೇಖರ್ ಹೆಗ್ಗೊಟ್ಟಾರ್ ಮತ್ತು ಬಳಗದವರಿಂದ ರಂಗಗೀತೆ ಕಾರ್ಯಕ್ರಮ ನಡೆಯಿತು
ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಶುಕ್ರವಾರ ಚಂದ್ರಶೇಖರ್ ಹೆಗ್ಗೊಟ್ಟಾರ್ ಮತ್ತು ಬಳಗದವರಿಂದ ರಂಗಗೀತೆ ಕಾರ್ಯಕ್ರಮ ನಡೆಯಿತು   

ಮೂಡಬಿದಿರೆ: ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಶುಕ್ರವಾರ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಚಂದ್ರಶೇಖರ್ ಹೆಗ್ಗೊಟ್ಟಾರ್ ಮತ್ತು ಬಳಗದವರು ನಡೆಸಿಕೊಟ್ಟ ‘ರಂಗಗೀತೆಗಳು’ ಕೇಳುಗರ ಕಿವಿ ಇಂಪಾಗಿಸಿತು.

ಮೊದಲಿಗೆ ಹಯವದನ ನಾಟಕದ ಬಿ.ವಿ. ಕಾರಂತರ ಸಂಯೋಜನೆಯ ‘ಗಜವದನ ಹೇ ರಂಭಾ’ ಹಾಡಿನ ಮೂಲಕ ‘ಪ್ರೇಕ್ಷಕರೇ ನಾಟಕದ ಮಾಲೀಕ’ ಎಂಬ ಸಂದೇಶವನ್ನು ಗೀತೆಯ ಮೂಲಕ ಜನರ ಮನಮುಟ್ಟಿಸಿದರು.

ಹಾರ್ಮೋನಿಯಂ, ಖಂಜೀರಾ, ತಬಲ, ಡೋಲಕ್, ಗೆಜ್ಜೆ, ತಾಳ ಹೀಗೆ ಹಲವಾರು ವಾದನಗಳ ಮಿಳಿತ ನೆರೆದಿದ್ದ ಪ್ರೇಕ್ಷಕರ ಗಮನವನ್ನು ವೇದಿಕೆಯು ಸೆಳೆಯುವಂತೆ ಮಾಡಿತು. ಜಾನಪದ ಗೀತೆಗಳಿಗೆ ಭದ್ರ ಬುನಾದಿಯಾಗಿರುವ ರಂಗಭೂಮಿಯಲ್ಲಿ ಇನ್ನೂ ಹಲವಾರು ಜಾನಪದ ಗೀತೆಗಳು ಅನುರಣಿಸುತ್ತಿದೆ, ಅಂತಹದ್ದೇ ಒಂದು ರಂಗಗೀತೆಯಾದ ‘ಗೋವಿಂದ ಮುರಹರ ಗೋವಿಂದ’ ಗೀತೆ ಪ್ರೇಕ್ಷಕರನ್ನು ಭಕ್ತಿಪರವಶರನ್ನಾಗಿಸಿತು.

ADVERTISEMENT

ಪು.ತಿ.ನ ಅವರ ರಚನೆಯ ‘ಗೋಕುಲ ನಿರ್ಗಮನ’ ನಾಟಕದ ‘ಬಾ ಸಖಿ ಬಾ ಸಖಿ’ ಎಂಬ ರಾಧೆಯ ವೃಂದಾವನದ ಆಟಗಳ ವರ್ಣಿಸುವ ಹಾಡು ಪ್ರಸ್ತುತ ಪಡಿಸಿದ ರತ್ನಾ, ಬಿ.ವಿ ಕಾರಂತರ ರಚನೆಗೆ ಮತ್ತಷ್ಟು ಮೆರುಗು ತಂದರು. ನಂತರ ಚಂದ್ರಶೇಖರ್ ಹೆಗ್ಗೊಟ್ಟಾರ್ ಹಾಡಿದ ‘ಸತ್ತವರ ನೆರಳು’ ನಾಟಕದ ‘ಜೋ ಜೋ ಶ್ರೀ ಕೃಷ್ಣ’ ಗೀತೆ ಮಮತೆ ತುಂಬಿದ ಜೋಗುಳದಂತಿತ್ತು.

ದ.ರಾ.ಬೇಂದ್ರೆ ಅವರ ‘ಮರುಳು ಮಾಡಕ್ಕೆ ಹೋಗಿ’ ಅರ್ಥಗರ್ಭಿತ ಕವನ ಸಾಲುಗಳಿಗೆ ಚಂದ್ರಶೇಖರ್ ಹೆಗ್ಗೊಟ್ಟಾರ್ ಕಂಠ ಜೀವ ತುಂಬಿತು. ಸುಬ್ರಹ್ಮಣ್ಯ ಮೈಸೂರ್ ನುಡಿಸಿದ ಪಕ್ಕವಾದ್ಯಗಳಾದ ತಬಲ, ಡೋಲಕ್, ಖಂಜೀರಗಳೆಲ್ಲವೂ ತಾಳಬದ್ಧವಾಗಿ, ಲಯಬದ್ಧವಾಗಿ ಜನರ ಮನಸ್ಸನ್ನು ಸೇರಿಬಿಟ್ಟಿತು.

ರಂಗಗೀತೆಗಳು ಆಧುನಿಕ ಸ್ಪರ್ಶ ಕಂಡಿದ್ದರೂ, ಪೌರಾಣಿಕ ನಾಟಕಗಳ ಸಂಗೀತ ಹಚ್ಚಹಸುರಾಗಿದೆ ಎಂಬ ಮಾತಿಗೆ ಸಾಕ್ಷಿಯಂತೆ ‘ರಂಜಿಪಳೀ ತರುಣಿ’ ಎಂಬ ಶೃಂಗಾರ ಗೀತೆ ಪ್ರೇಕ್ಷಕರನ್ನು ರಸಗಡಲಲ್ಲಿ ತೇಲಿಸಿ ಬಿಟ್ಟಿತು. ‘ಜೋಕುಮಾರ ಸ್ವಾಮಿ’ ನಾಟಕದ ಗೌಡ್ತಿ ಪಾತ್ರ ಮಕ್ಕಳಿಗಾಗಿ ತವಕಿಸುತ್ತಿರುವ ಸಾಲುಗಳನ್ನು ಹೊಂದಿದ ‘ಮೂಡಿ ಬಾರಯ್ಯ ಬಾರೋ ಗಿಣಿರಾಮ ಹಾಡು’ ಆ ಪಾತ್ರವನ್ನು ಜನರ ಕಣ್ಣಿಗೆ ಕಟ್ಟಿಕೊಡುವಂತಿತ್ತು.

ಜಗದೊಳಗೆ ಎಲ್ಲರೂ ಕಳ್ಳರೇ, ಆದರೆ, ಬೇರೆ ಬೇರೆ ಕಾರಣಕ್ಕಷ್ಟೇ ಎಂಬ ಅರ್ಥ ಹೊಂದಿದ್ದ ‘ಸದಾರಮೆ’ ನಾಟಕದ ‘ಇರೋರೆಲ್ಲ ಬರೋರೆಲ್ಲ ದುಡ್ಡಿಗಾಗಿ’ ಎಂಬ ಹಾಡು ಪ್ರಸ್ತುತ ಸಮಾಜಕ್ಕೆ ಕೈಗನ್ನಡಿ ಹಿಡಿದಂತಿತ್ತು. ಅನೇಕ ರಂಗಾಸಕ್ತರ ನೆಚ್ಚಿನ ಗೀತೆಯೆಂದೇ ಕರೆಯಲ್ಪಡುವ ‘ಬಂದಾನೋ ಬಂದ ಸವಾರ’ ಹಾಡು ಮತ್ತೊಮ್ಮೆ ಸೇರಿದ್ದ ಜನಮಾನಸದ ನೆಚ್ಚಿನ ಹಾಡಾಯಿತು. ಚಂದ್ರಶೇಖರ್ ಹೆಗ್ಗೊಟ್ಟಾರ್ ಮತ್ತು ತಂಡಕ್ಕೆ ಕಾರ್ಪೊರೇಷನ್ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಸುಧೀರ್ ಸ್ಮರಣಿಕೆ ನೀಡಿ ಗೌರವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.