ಬೆಂಗಳೂರು: ಸಮಾನ ಮನಸ್ಕರು ಸೇರಿ ಈ ಬಾರಿಯ ಜನ ನುಡಿ ಸಮ್ಮೇಳನವನ್ನು ಡಿ.1 ಮತ್ತು 2ರಂದು ಮಂಗಳೂರಿನ ನಂತೂ
ರಿನಲ್ಲಿ ಆಯೋಜಿಸಿದ್ದಾರೆ. ಇದಕ್ಕೆ ಸಾಂಸ್ಕೃತಿಕ ಸಂಘಟನೆಯಾದ ‘ಅಭಿಮತ ಮಂಗಳೂರು’ ಸಹಯೋಗ ನೀಡುತ್ತಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಚಿತ್ರ ನಿರ್ದೇಶಕ ಬಿ.ಸುರೇಶ್, ‘ನುಡಿಯು ಸಿರಿಯಲ್ಲ, ಬದುಕು’ ಎನ್ನುವುದು ಜನ ನುಡಿಯ ಧ್ಯೇಯವಾಕ್ಯ. ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದರು.
ಡಿ.1ರಂದು ‘ಭವಿಷ್ಯದ ಭಾರತ: ಮಾರ್ಕ್ಸ್–ಅಂಬೇಡ್ಕರ್–ಗಾಂಧಿ–ಲೋಹಿಯಾ’ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಇದರಲ್ಲಿ ಜಿ.ರಾಜಶೇಖರ್, ಪುರುಷೋತ್ತಮ ಬಿಳಿಮಲೆ, ಮುಜಾಫರ್ ಅಸ್ಸಾದಿ, ಡಿ.ಡೊಮಿನಿಕ್ ವಿಚಾರ ಮಂಡನೆ ಮಾಡಲಿದ್ದಾರೆ. ‘ಭಾರತದ ಮುಸ್ಲಿಮರು’ ವಿಷಯದ ಬಗ್ಗೆ ಅಬು ಸಲಾಂ ಪುತ್ತಿಗೆ ಮಾತನಾಡಲಿದ್ದಾರೆ. ಕೊರಗರ ಗಜಮೇಳ, ಬ್ಯಾರಿ ಸಮುದಾಯದ ದಪ್ಪು ಕುಣಿತವನ್ನು ಸಂಜೆ ಆಯೋಜಿಸಲಾಗಿದೆ.
ಡಿ.2ರಂದು ಬೆಳಿಗ್ಗೆ 20 ಕವಿಗಳು ಕವನ ವಾಚನ ಮಾಡಲಿದ್ದಾರೆ. ‘ದಲಿತ ಭಾರತ: ಸಂವಾದ ಗೋಷ್ಠಿ’ಯಲ್ಲಿ ಎಂ.ನಾರಾಯಣಸ್ವಾಮಿ, ರವಿಕುಮಾರ್, ಪುಷ್ಪಾ ಅಮರೇಶ್ ವಿಷಯ ಮಂಡನೆ ಮಾಡಲಿದ್ದಾರೆ. ‘ಮಹಿಳಾ ಭಾರತ’ ಗೋಷ್ಠಿಯಲ್ಲಿ ಎಚ್.ಎಸ್.ಅನುಪಮಾ, ಚಮನ್ ಫರ್ಜಾನ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.
ಸಮಾರೋಪದಲ್ಲಿ ವಲೇರಿಯನ್ ರೊಡ್ರಿಗಸ್, ಮಾವಳ್ಳಿ ಶಂಕರ್, ಎಸ್.ವರಲಕ್ಷ್ಮಿ, ದಿನೇಶ್ ಅಮಿನ್ ಮಟ್ಟು ಅನಿಸಿಕೆ ಹಂಚಿಕೊಳ್ಳಲಿದ್ದಾರೆ. ಜನವಾದಿ ಮಹಿಳಾ ಸಂಘಟನೆ ಸಂಚಾಲಕಿ ಕೆ.ಎಸ್.ವಿಮಲಾ, ‘ಸಾಮರಸ್ಯ ಕದಡುವ ಶಕ್ತಿಗಳನ್ನು ಹತ್ತಿಕ್ಕಬೇಕಿದೆ. ಅದಕ್ಕೆ ಪರ್ಯಾಯ ಸಾಂಸ್ಕೃತಿಕ ಪರಿಹಾರಗಳನ್ನು ಹುಡುಕಬೇಕಿದೆ. ಈ ಆಶಯದಿಂದ ಜನ ನುಡಿಯನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.