ADVERTISEMENT

‘ಜಾನಪದ ಕಡಲೋತ್ಸವ’ ಮಾರ್ಚ್‌ 1ರಿಂದ

ಮೂರು ದಿನಗಳ ಉತ್ಸವದ ಉದ್ಘಾಟನೆಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 4:46 IST
Last Updated 27 ಫೆಬ್ರುವರಿ 2024, 4:46 IST
ಜಾನಪದ ಕಡಲೋತ್ಸವದ  ಆಹ್ವಾನ ಪತ್ರಿಕೆಯನ್ನು ಮೋಹನದಾಸ ರೈ, ರಾಜೇಶ್‌ ಆಳ್ವ, ತಾರಾನಾಥ ಶೆಟ್ಟಿ ಬೋಳಾರ, ರಾಜೇಶ್ ಸ್ಕೈಲಾರ್ಕ್‌, ಮಾಲತಿ ಶೆಟ್ಟಿ ಹಾಗೂ ಚಂಚಲಾ ತೇಜೋಮಯ ಅವರು ಸೋಮವಾರ ಬಿಡುಗಡೆ ಮಾಡಿದರು
ಜಾನಪದ ಕಡಲೋತ್ಸವದ  ಆಹ್ವಾನ ಪತ್ರಿಕೆಯನ್ನು ಮೋಹನದಾಸ ರೈ, ರಾಜೇಶ್‌ ಆಳ್ವ, ತಾರಾನಾಥ ಶೆಟ್ಟಿ ಬೋಳಾರ, ರಾಜೇಶ್ ಸ್ಕೈಲಾರ್ಕ್‌, ಮಾಲತಿ ಶೆಟ್ಟಿ ಹಾಗೂ ಚಂಚಲಾ ತೇಜೋಮಯ ಅವರು ಸೋಮವಾರ ಬಿಡುಗಡೆ ಮಾಡಿದರು   

ಮಂಗಳೂರು: ಕರ್ನಾಟಕ ಜಾನಪದ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಕದಳಿ ಬೀಚ್ ಟೂರಿಸಂ ಸಹಭಾಗಿತ್ವದಲ್ಲಿ ರೋಹನ್ ಕಾರ್ಪೊರೇಶನ್ ಸಹಯೋಗದಲ್ಲಿ ಮಾರ್ಚ್‌ 1ರಿಂದ 3ರವರೆಗೆ ಪಣಂಬೂರು ಕಿನಾರೆಯಲ್ಲಿ ಜಾನಪದ ಪ್ರದರ್ಶನ, ಆಹಾರ ಮೇಳ, ಮನರಂಜನಾ ಕ್ರೀಡೆಗಳನ್ನು ಒಳಗೊಂಡ ‘ಜಾನಪದ ಕಡಲೋತ್ಸವ’ವನ್ನು ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದ ಕರ್ನಾಟಕ ಜಾನಪದ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಚಾಲಕ ರಾಜೇಶ್ ಆಳ್ವ, ‘ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರು ಮಾರ್ಚ್‌ 1 ರಂದು ಸಂಜೆ 6.30ಕ್ಕೆ ಜಾನಪದ ಕಡಲೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸುವರು. ಶಾಸಕ ಡಾ. ವೈ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಜಾನಪದ ಕಡಲೋತ್ಸವ ಪ್ರಶಸ್ತಿ ಪ್ರದಾನ ಹಾಗೂ 13 ಜಾನಪದ ಕಲಾವಿದರಿಗೆ ಗೌರವಾರ್ಪಣೆ ನಡೆಯಲಿದೆ. ರಾತ್ರಿ 7.30ರಿಂದ ರಮೇಶ್ಚಂದ್ರ ಹಾಗೂ ಕಲಾವತಿ ದಯಾನಂದ ಬಳಗದಿಂದ ಜಾನಪದ ರಸಸಂಜೆ ಏರ್ಪಡಿಸಲಾಗಿದೆ‌’ ಎಂದರು

‘ಮಾರ್ಚ್‌ 2ರಂದು ಸಂಜೆ 5.30ರಿಂದ ವಿಚಾರ ಸಂಕಿರಣ ಮತ್ತು ಜಾನಪದ ಪರಿಷತ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಶಾಸಕ ಅಶೋಕ್ ಕುಮಾರ್ ರೈ, ಕರ್ನಾಕಟ ಜಾನಪದ ಪರಿಷತ್ತಿನ ಆಡಳಿತಾಧಿಕಾರಿ ನಂದಕುಮಾರ್ ಹೆಗ್ಡೆ‌ ಮತ್ತಿತರರು ಭಾಗವಹಿಸುವರು. ಜಾನಪದ ವಿದ್ವಾಂಸ  ಚಿನ್ನಪ್ಪ ಗೌಡ ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯದ ಉಪನ್ಯಾಸಕಿ ಸಾಯಿ ಗೀತಾ ಮತ್ತು ದಯಾನಂದ ಕತ್ತಲ್‌ಸಾರ್ ಹಾಗೂ ರಂಗಕರ್ಮಿ ಮೈಮ್ ರಾಮ್‌ದಾಸ್ ವಿಚಾರ ಮಂಡಿಸಲಿದ್ದಾರೆ. ಸಂಜೆ 7.30ಕ್ಕೆ ಅಜಯ್ ವಾರಿಯರ್ ತಂಡದವರು 'ಸಂಗೀತ ರಸ ಸಂಜೆ' ನಡೆಸಿಕೊಡಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಮಾರ್ಚ್‌ 3ರಂದು  ಮಧ್ಯಾಹ್ನ 3ಕ್ಕೆ ಗಾಳಿಪಟ ಪ್ರದರ್ಶನ ಏರ್ಪಡಿಸಲಾಗಿದ್ದು, ಶಾಸಕ ಡಿ. ವೇದವ್ಯಾಸ್ ಕಾಮತ್‌  ಉದ್ಘಾಟಿಸುವರು.  ಬಳಿಕ ಜಾನಪದ ಮತ್ತು ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ.  ಸಂಜೆ 5.30ಕ್ಕೆ ಸಮಾರೋಪ ಸಮಾರಂಭದಲ್ಲಿ ಜಾನಪದ ಪರಿಷತ್ ಪ್ರಶಸ್ತಿ ಪ್ರದಾನ ನಡೆಯಲಿದೆ.  ಅಯೋಧ್ಯೆಯ ಬಾಲರಾಮ ವಿಗ್ರಹ ಕೆತ್ತಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ 'ಅಮರ ಶಿಲ್ಪಿ' ಬಿರುದು ಪ್ರದಾನ ಮಾಡಲಾಗುತ್ತದೆ. ಸಂಜೆ 7.30 ರಿಂದ ಮಣಿಕಾಂತ್ ಕದ್ರಿ ಬಳಗದವರಿಂದ ‘ಮ್ಯೂಸಿಕಲ್ ನೈಟ್’ ಕಾರ್ಯಕ್ರಮ ಇರಲಿದೆ’ ಎಂದರು.

ಜಾನಪದ ಪರಿಷತತ್‌ನ ಜಿಲ್ಲಾ ಘಟಕದ ಉಪಾಧ್ಯಕ್ಷ ಮೋಹನ್ ದಾಸ್ ರೈ, ಪ್ರಧಾನ‌ ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ಕ್, ಖಜಾಂಚಿ ತಾರಾನಾಥ ಶೆಟ್ಟಿ ಬೋಳಾರ್, ಮಾಲತಿ ಶೆಟ್ಟಿ ಮಾಣೂರು ಹಾಗೂ ಪರಿಷತ್ತಿನ ಮಂಗಳೂರು ತಾಲ್ಲೂಕು ಘಟಕದ ಅಧ್ಯಕ್ಷೆ ಚಂಚಲಾ ತೇಜೋಮಯ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.