ಮಂಗಳೂರು: ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಎಂ.ಎನ್. ರಾಜೇಂದ್ರಕುಮಾರ ಹೆಸರು ಕೇಳಿಬರುತ್ತಿದ್ದು, ರಾಜ್ಯದ ಮುಖಂಡರಿಗೆ ಆಮಿಷವೊಡ್ಡಿ ಟಿಕೆಟ್‌ಗೆ ಲಾಬಿ ಮಾಡುತ್ತಿರುವ ಆರೋಪ ಕೇಳಿಬರುತ್ತಿವೆ. ರಾಜೇಂದ್ರಕುಮಾರ್ ವಿರುದ್ಧ ಹಲವು ಭ್ರಷ್ಟಾಚಾರ ಆರೋಪ ಕೇಳಿ ಬರುತ್ತಿದೆ. ಇಂಥವರಿಗೆ ಟಿಕೆಟ್ ಕೊಡುವುದು ಸರಿಯಲ್ಲ. ಅವರು ಗ್ರಾಮ ಪಂಚಾಯಿತಿ ಸದಸ್ಯರಾಗಲೂ ಅರ್ಹರಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹೇಳಿದರು.
ರಾಜೇಂದ್ರಕುಮಾರ್‌ಗೆ ಟಿಕೆಟ್ ನೀಡಿದರೆ ವಿರೋಧ ಮಾಡುತ್ತೇನೆ. ಟಿಕೆಟ್ ನೀಡಿದರೆ, ಅವರ ವಿರುದ್ಧ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 4–5 ಲಕ್ಷ ಬಿಲ್ಲವರು, ಅಷ್ಟೇ ಸಮುದಾಯದ ದಲಿತರು ಇದ್ದಾರೆ. ಈಗ ಬಿಲ್ಲವರ ಕೋಟಾದಲ್ಲಿ ಹರಿಪ್ರಸಾದ, ಸೊರಕೆ ಆಕಾಂಕ್ಷಿಗಳಾಗಿದ್ದಾರೆ ಎಂದರು.
ರಮಾನಾಥ ರೈ, ಹರಿಪ್ರಸಾದ, ವಿನಯಕುಮಾರ ಸೊರಕೆ ಯಾರೇ ನಿಂತರೂ ಅದಕ್ಕೆ ಅಭ್ಯಂತರವಿಲ್ಲ ಎಂದ ಅವರು, ಐವನ್ ಡಿಸೋಜಗೆ ಟಿಕೆಟ್ ಸಿಗುವುದಿಲ್ಲ. ಅವರು ನಿಂತರೆ ಅದನ್ನು ವಿರೋಧಿಸುತ್ತೇನೆ. ಅವರ ವಿರುದ್ಧವೂ ಸ್ಪರ್ಧೆ ಮಾಡುತ್ತೇನೆ ಎಂದರು.
ನಾನೂ ಟಿಕೆಟ್ ಆಕಾಂಕ್ಷಿ: ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ನಿಲ್ಲುವ ಅಧಿಕಾರ ಎಲ್ಲರಿಗೂ ಇದೆ. ಪ್ರತಿ ಕಾರ್ಯಕರ್ತನೂ ಚುನಾವಣೆಗೆ ನಿಲ್ಲಬಹುದು.ಅದೇ ರೀತಿ ನಾನೂ ಈ ಬಾರಿ ಆಕಾಂಕ್ಷಿಯಾಗಿದ್ದು, ಟಿಕೆಟ್ ಸಿಕ್ಕರೆ ಸ್ಪರ್ಧಿಸುವುದು ಖಚಿತ.ಅದಕ್ಕಾಗಿ ಎರಡುದಿನದಲ್ಲಿ ದೆಹಲಿಗೆ ತೆರಳಿ ರಾಹುಲ್, ಸೋನಿಯಾ, ಆಂಟನಿ ಅವರನ್ನು ಭೇಟಿ ಆಗುತ್ತೇನೆ ಎಂದರು.
ಎಲ್ಲರೂ ನನ್ನ ಸ್ಪರ್ಧೆಗೆ ಒತ್ತಾಯಿಸುತ್ತಿದ್ದಾರೆ. ಕೊಂಕಣಿ ಜನರು ನನಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ನಾನು ತೊಡಗಿದ್ದು, ಅದನ್ನು ಬೆಂಬಲಿಸಿ ಜನರು ನನಗೆ ಮತ ಹಾಕಬಹುದು ಎಂದರು.
ಪ್ರಧಾನಿ ಮೋದಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆ. ಅವರು ಜಯಗಳಿಸುತ್ತಾರೆ. ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಭ್ರಷ್ಟಾಚಾರದ ನಿವಾರಣೆಗೆ ಮೋದಿ ಅವರಂತಹ ದಿಟ್ಟ ನಾಯಕತ್ವ ಬೇಕು ಎಂದು ಅಭಿಪ್ರಾಯಪಟ್ಟರು.
ಉಡುಪಿ- ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವುದು ಸರಿಯಲ್ಲ. ಈ ನಿರ್ಧಾರವನ್ನು ಬದಲಾಯಿಸುವುದು ದೊಡ್ಡ ವಿಷಯವಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.