ADVERTISEMENT

ಮಂಗಳೂರು ಗಲಭೆ, ಗೋಲಿಬಾರ್: ಜನತಾ ಅದಾಲತ್ ವಿಚಾರಣೆ ಆರಂಭ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 8:41 IST
Last Updated 6 ಜನವರಿ 2020, 8:41 IST
ಮಂಗಳೂರು ಗಲಭೆ (ಸಂಗ್ರಹ ಚಿತ್ರ)
ಮಂಗಳೂರು ಗಲಭೆ (ಸಂಗ್ರಹ ಚಿತ್ರ)   
""

ಮಂಗಳೂರು:ನಗರದಲ್ಲಿ ಡಿಸೆಂಬರ್ 19ರಂದು ನಡೆದ ಗಲಭೆ ಮತ್ತು ಗೋಲಿಬಾರ್ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ನೇತೃತ್ವದಲ್ಲಿ ಸೋಮವಾರ ‘ಜನತಾ ಅದಾಲತ್’ ವಿಚಾರಣೆ ಮತ್ತೆ ಆರಂಭವಾಗಿದೆ. ಈಗಾಗಲೇ ವಿಚಾರಣೆಯಲ್ಲಿ ಕೆಲವರು ತಮ್ಮ ಹೇಳಿಕೆಗಳನ್ನೂ ದಾಖಲಿಸಿದ್ದಾರೆ.

ಪೊಲೀಸರು ಮತ್ತು ಹೋಟೆಲ್ ಮಾಲೀಕರ ಆಕ್ಷೇಪದ ಹಿನ್ನೆಲೆಯಲ್ಲಿ ಸಭೆ ಒಮ್ಮೆ ಸ್ಥಗಿತಗೊಂಡಿತ್ತು.ಪರ್ಯಾಯ ಸ್ಥಳದಲ್ಲಿ ಸಭೆ ನಡೆಸಲು ಆಯೋಜಕರು ಆಲೋಚಿಸುತ್ತಿದ್ದರು. ಅಷ್ಟರಲ್ಲಿ ಪರಿಸ್ಥಿತಿ ತಿಳಿಗೊಂಡು ಮತ್ತೆ ಸಭೆ ಆರಂಭವಾಯಿತು.

‘ಗಲಭೆ ಮತ್ತು ಗೋಲಿಬಾರ್ ಪ್ರಕರಣ ಕುರಿತು ಪೊಲೀಸ್ ತನಿಖೆ ಮತ್ತು ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಯುತ್ತಿದೆ. ಈ ಹಂತದಲ್ಲಿ ಇಂತಹ ವಿಚಾರಣೆ ನಡೆಸಬಾರದು’ಎಂದು ಸಭೆಯ ಅಯೋಜಕರಾಗಿರುವ ಅಶೋಕ್ ಮರಿದಾಸ್ ಅವರಿಗೆ ಮಂಗಳೂರು ಉತ್ತರ (ಬಂದರು) ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಭಾನುವಾರ ರಾತ್ರಿ ನೋಟಿಸ್ ಜಾರಿ ಮಾಡಿದ್ದರು.ನೋಟಿಸ್ ಪ್ರತಿಯನ್ನು ಹೋಟೆಲ್ ವ್ಯವಸ್ಥಾಪಕರಿಗೂ ಪೊಲೀಸರು ತಲುಪಿಸಿದ್ದರು.

ADVERTISEMENT

ಸೋಮವಾರ ಸಭೆ ಆರಂಭವಾಗಿ,ವಿಚಾರಣೆ ನಡೆಯುತ್ತಿದ್ದಾಗಲೇ ನಿಲ್ಲಿಸುವಂತೆ ಹೋಟೆಲ್ ಸಿಬ್ಬಂದಿಗೆ ಪೊಲೀಸರು ದೂರವಾಣಿ ಮೂಲಕ ಸೂಚನೆ ನೀಡಿದರು.ಸಭೆ ನಡೆಯುತ್ತಿರುವ ಸ್ಥಳಕ್ಕೆ ಬಂದ ಸೂರ್ಯ ಹೋಟೆಲ್ ವ್ಯವಸ್ಥಾಪಕ ತಾರಾನಾಥ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು.ಇದರಿಂದಗೊಂದಲದ ವಾತಾವರಣ ನಿರ್ಮಾಣವಾಯಿತು.

ಬೆಂಗಳೂರಿನ ಇಂಡಿಯನ್ ಸೋಷಿಯಲ್ ಇನ್‌ಸ್ಟಿಟ್ಯೂಟ್ನ ಲಿಸೆನಿಂಗ್ ಪೋಸ್ಟ್‌ ಜನತಾ ಅದಾಲತ್ ಆಯೋಜಿಸಿತ್ತು.

ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಹಿರಿಯ ವಕೀಲ ಬಿ.ಟಿ.ವೆಂಕಟೇಶ್ ಮತ್ತು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ನೇತೃತ್ವದ 'ಪೀಪಲ್ಸ್ ಟ್ರಿಬ್ಯುನಲ್' ಸಾಕ್ಷಿಗಳು ಹಾಗೂ ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸಲು ಪ್ರಯತ್ನಿಸಿತು.

ಗಲಭೆ ದಿನಗಳಲ್ಲಿ ಪೊಲೀಸರಿಂದ ಹಲ್ಲೆಗೊಳಗಾಗಿದ್ದ ಪತ್ರಕರ್ತ ಇಸ್ಮಾಯಿಲ್ ಝೋರೆಝ್ ಅದಾಲತ್‌ನಲ್ಲಿ ಹೇಳಿಕೆ ದಾಖಲಿಸಿದರು. ಹೈಲ್ಯಾಂಡ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೂಸೂಫ್ ಹೇಳಿಕೆ ದಾಖಲಿಸಲು ಮುಂದಾಗಿದ್ದರು. ಅಷ್ಟರಲ್ಲಿ ಗೊಂದಲ ಹೆಚ್ಚಾಗಿ ಸಭೆ ಸ್ಥಗಿತಗೊಂಡಿತ್ತು.

‘ಸತ್ಯಾಂಶ ತಿಳಿಯಲು ಜನರ ಹೇಳಿಕೆ ಆಲಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಸರ್ಕಾರೇತರ ಸಂಸ್ಥೆಯ ಪರವಾಗಿ ನಾವು ಬಂದಿದ್ದೇವೆ.‌ ಜನರಿಗೆ ತೊಂದರೆ ಆಗಿದೆಯೇ ಎಂಬುದನ್ನು ತಿಳಿಯುವ ನಮ್ಮ ಪ್ರಯತ್ನಕ್ಕೆ ಅವಕಾಶ ನಿರಾಕರಿಸಿದರೆ ಮರದ ಕೆಳಗೆ ಕುಳಿತು ಸಭೆ ನಡೆಸುತ್ತೇವೆ’ ಎಂದು ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಎಚ್ಚರಿಸಿದರು.

ಮಂಗಳೂರಿನಲ್ಲಿ ಸೋಮವಾರ ಜನತಾ ಅದಾಲತ್ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.