ಮಂಗಳೂರು: ಮಾದಕ ಪದಾರ್ಥಗಳ ಮೂಲಕ ದೇಶದ ಭವಿಷ್ಯ ಹಾಳುಮಾಡುವ ಷಡ್ಯಂತ್ರ ನಡೆಯುತ್ತಿದ್ದು ಇದರ ವಿರುದ್ಧ ಹೋರಾಡಲು ಆಂತರಿಕ ಸೈನ್ಯದ ಅಗತ್ಯವಿದೆ ಎಂದು ಸಂಸದ ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲ್ಲೂಕು ಸಮಿತಿ ಮತ್ತು ಮಹಿಳಾ ಘಟಕವು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಮಾದಕ ವ್ಯಸನಮುಕ್ತ ಮಂಗಳೂರು ಜಾಥಾದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮಾದಕ ಪದಾರ್ಥ ಜಾಲ ಯುವಸಮುದಾಯವನ್ನು ಹಾಳುಗೆಡವುತ್ತಿದ್ದು ಅಭಿವೃದ್ಧಿಗೆ ಮಾರಕವಾಗುತ್ತಿದೆ. ಮಾದಕ ಪದಾರ್ಥಗಳ ಬಳಿಗೆ ಯುವಜನರು ಸುಳಿಯದಂತೆ ಮಾಡಬೇಕಾಗಿದೆ. ಆದರೆ ಈ ಜಾಲವನ್ನು ಮಟ್ಟಹಾಕಲು ದೇಶದಲ್ಲಿ ಸಿದ್ಧ ಮಾದರಿ ಇಲ್ಲ. ಆದ್ದರಿಂದ ಜನರು ಒಟ್ಟಾಗಬೇಕಾಗಿದೆ ಎಂದು ಅವರು ಹೇಳಿದರು.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ ಮಾದಕ ಪದಾರ್ಥ ಜಾಲವನ್ನು ಮಟ್ಟ ಹಾಕಲು ಸಮಾಜವೇ ಒಟ್ಟಾಗಬೇಕಾಗಿದೆ. ಪೋಷಕರು ಮಕ್ಕಳ ಮೇಲೆ ನಿಗಾ ವಹಿಸಬೇಕು, ತಪಾಸಣಾ ಕಿಟ್ ತಂದಿರಿಸಿಕೊಳ್ಳಬೇಕು. ಕಾಲೇಜುಗಳಲ್ಲೂ ತಪಾಸಣೆ ಮಾಡಬೇಕು. ಇದರಿಂದ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳುವ ಸಾಧ್ಯತೆ ಇದೆ. ಮಾದಕ ಪದಾರ್ಥ ಸೇವಿಸಿದವರು ಯಾರೂ ದೊಡ್ಡವರಾಗಲಿಲ್ಲ. ಈ ಚಟ ಸಾಧನೆಗೆ ಅಡ್ಡಿಯಾಗುತ್ತದೆ ಎಂದರು.
ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ ಮಾದಕ ಪದಾರ್ಥಕ್ಕೆ ಎಲ್ಲವನ್ನೂ ನಾಶ ಮಾಡುವ ತಾಕತ್ತಿದೆ. ಇದನ್ನು ಮಟ್ಟ ಹಾಕಲು ಸಂಘಟಿತ ಹೋರಾಟ ಬೇಕಾಗಿದೆ ಎಂದರು.
ಮೇಯರ್ ಮನೋಜ್ ಕುಮಾರ್, ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಖಿ, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಶಶಿಧರ ಹೆಗ್ಡೆ, ಪ್ರವೀಣ್ ಚಂದ್ರ ಆಳ್ವ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ರಾಜ್ಯ ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸಬಿತಾ ಆರ್.ಶೆಟ್ಟಿ, ತಾಲ್ಲೂಕು ಘಟಕದ ಸಂಚಾಲಕ ವಸಂತ ಶೆಟ್ಟಿ, ಸಹ ಸಂಚಾಲಕ ಎಕ್ಕಾರು ರತ್ನಾಕರ ಶೆಟ್ಟಿ, ಆಶಾಜ್ಯೋತಿ ರೈ ಇದ್ದರು. ಎಸ್‌ಡಿಎಂ ಕಾನೂನು ಕಾಲೇಜು ಪ್ರಾಚಾರ್ಯ ತಾರಾನಾಥ ಪ್ರತಿಜ್ಞಾ ವಿಧಿ ಬೋಧಿಸಿದರು. ಪುಷ್ಪರಾಜ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ಆವರಣದಿಂದ ಹೊರಟ ಜಾಥಾ ಪಿವಿಎಸ್ ವೃತ್ತದ ಬಳಿ ತೆರಳಿ ವಾಪಸ್ ಕಾಲೇಜಿನಲ್ಲಿ ಮುಕ್ತಾಯಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.