ADVERTISEMENT

ದ. ಕನ್ನಡ: ಬಸ್‌ನಲ್ಲಿ ಮಹಿಳೆಯ ಬ್ಯಾಗ್‌ನಲ್ಲಿದ್ದ ₹ 67 ಲಕ್ಷ ಮೌಲ್ಯದ ಆಭರಣ ಕಳವು

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 4:32 IST
Last Updated 2 ಜುಲೈ 2024, 4:32 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಮಂಗಳೂರು: ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್‌ನಲ್ಲಿದ್ದ ಭಾರಿ ಮೌಲ್ಯದ ಆಭರಣಗಳು ಕಳವಾಗಿರುವ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೈನ ಪ್ಲಾಮಾ ರೆಸಿಡೆನ್ಸಿ ನಿವಾಸಿ ಗೀತಾ ರೈ ಆಭರಣ ಕಳೆದುಕೊಂಡವರು.

ಬ್ಯಾಂಕ್‌ನ ಲಾಕರ್‌ನಲ್ಲಿ ಇರಿಸಿದ್ದ ₹ 67 ಲಕ್ಷದ 75 ಸಾವಿರ ಮೌಲ್ಯದ ಆಭರಣವನ್ನು ಬೆಂಗಳೂರಿನಲ್ಲಿ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವುದಕ್ಕಾಗಿ ಗೀತಾ ಬಿಡಿಸಿಕೊಂಡಿದ್ದರು. ವಜ್ರದ ಹರಳುಗಳಿರುವ ವಿವಿಧ ನಮೂನೆಯ ಚಿನ್ನದ ಒಡವೆ ಅದರಲ್ಲಿತ್ತು.

ಜೂನ್‌ 15ರಂದು ಆಭರಣ ತೆಗೆದುಕೊಂಡು ಬಂದು ಹ್ಯಾಂಡ್‌ಬ್ಯಾಗ್‌ನಲ್ಲಿ ಹಾಕಿ ಮನೆಯ ಬೆಡ್‌ರೂಂನಲ್ಲಿ ಇರಿಸಿದ್ದರು. 19ರಂದು ಬೆಳಿಗ್ಗೆ 7 ಗಂಟೆಗೆ ಕೆಎಸ್ಆರ್‌ಟಿಸಿ ಐರಾವತ ಬಸ್‌ನಲ್ಲಿ ತೆರಳಿದ್ದರು. ಇತರ ಲಗೇಜ್ ಜೊತೆಯಲ್ಲಿ ಆಭರಣಗಳು ಇರುವ ಹ್ಯಾಂಡ್ ಬ್ಯಾಗ್ ಕೂಡ ಇತ್ತು ಎನ್ನಲಾಗಿದ್ದು ಹಾಸನ ತಲುಪಿದಾಗ ಹ್ಯಾಂಡ್ ಬ್ಯಾಗ್ ಪರಿಶೀಲಿಸಿದ್ದಾರೆ. ಆಗ ಬ್ಯಾಗ್‌ನಲ್ಲಿದ್ದ ಆಭರಣ ಕಳವಾಗಿರುವ ಬಗ್ಗೆ ತಿಳಿದಿದೆ. ಪಕ್ಕದಲ್ಲಿ ಕುಳಿತಿದ್ದ ಮಹಿಳೆ ಆಭರಣ ಕಳವು ಮಾಡಿರಬಹುದು ಎಂಬ ಶಂಕೆಯನ್ನು ಗೀತಾ ರೈ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿರುವ ಪೊಲೀಸರು ಆಭರಣ ಬಸ್‌ನಲ್ಲೇ ಕಳವಾಗಿದೆಯೇ ಅಥವಾ ಮನೆಯಿಂದ ಯಾರಾದರೂ ತೆಗೆದುಕೊಂಡು ಹೋಗಿದ್ದಾರಾ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.