ADVERTISEMENT

ಆಳ್ವಾಸ್‌ನಲ್ಲಿ ಅ.14,15ರಂದು ‘ಪ್ರಗತಿ’ ಉದ್ಯೋಗ ಮೇಳ

200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 12:33 IST
Last Updated 15 ಸೆಪ್ಟೆಂಬರ್ 2022, 12:33 IST
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ವಿವೇಕ್ ಆಳ್ವ ಮಾತನಾಡಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ವಿವೇಕ್ ಆಳ್ವ ಮಾತನಾಡಿದರು.   

ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಅಕ್ಟೋಬರ್ 14 ಮತ್ತು 15ರಂದು ‘ಆಳ್ವಾಸ್ ಪ್ರಗತಿ–2022’ ಬೃಹತ್ ಉದ್ಯೋಗ ಮೇಳವು ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಕಾಲೇಜಿನ ಆವರಣದಲ್ಲಿ ನಡೆಯಲಿದೆ.

ಸಂಸ್ಥೆಯ ಸಿಎಸ್‌ಆರ್‌ ಚಟುವಟಿಕೆಯ ಭಾಗವಾಗಿ ಗ್ರಾಮೀಣ ಭಾಗದ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ ಔದ್ಯೋಗಿಕ ನೆರವು ನೀಡುವ ಉದ್ದೇಶದಿಂದ 2007ರಿಂದ ಪ್ರತಿವರ್ಷ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. ಬ್ಯಾಂಕಿಂಗ್, ಹಣಕಾಸು, ಐಟಿ, ಐಟಿಎಸ್, ಮ್ಯಾನುಫ್ಯಾಕ್ಚರಿಂಗ್, ಹೆಲ್ತ್‌ಕೇರ್, ಫಾರ್ಮಾ, ಆಟೊಮೊಬೈಲ್, ಆತಿಥ್ಯವಲಯ, ಟೆಲಿಕಾಂ, ಮಾಧ್ಯಮ ಕ್ಷೇತ್ರಗಳ ಕಂಪನಿಗಳು ನೇಮಕಾತಿ ನಡೆಸಲಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪದವಿ, ಸ್ನಾತಕೋತ್ತರ ಪದವಿ, ವೈದ್ಯಕೀಯ, ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್, ಕಲಾ, ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಪಿಯುಸಿ, ಎಸ್ಸೆಸ್ಸೆಲ್ಸಿ ಪೂರೈಸಿದ ಆಸಕ್ತರು ಭಾವಹಿಸಬಹುದು. ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ http://alvaspragati.com/CandidateRegistrationPage ಇಲ್ಲಿ ಉಚಿತವಾಗಿ ನೋಂದಣಿ ಮಾಡಬೇಕು ಎಂದರು.

ADVERTISEMENT

ಈವರೆಗೆ 110 ಕಂಪನಿಗಳು ನೋಂದಾಯಿಸಿಕೊಂಡಿದ್ದು, ಇನ್ನೂ 96 ಕಂಪನಿಗಳು ಸೇರಲಿದ್ದು, ಒಟ್ಟು 200ಕ್ಕೂ ಮಿಕ್ಕಿ ಕಂಪನಿಗಳು ಭಾಗವಹಿಸಲಿವೆ. ಅಮೇಝಾನ್, ನೆಟ್‌ಮೆಡ್ಸ್, ಅವಿನ್ ಸಿಸ್ಟಮ್ಸ್, ಮೆಡ್ ಪ್ಯಾಕ್ ಮೊದಲಾದ ಪ್ರಮುಖ ಐಟಿ ಕಂಪನಿಗಳು ಬರಲಿವೆ. ಮಂಗಳೂರಿನ ಐಟಿ ಕಂಪನಿಗಳಾದ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್, ವಿನ್‌ಮನ್ ಸಾಫ್ಟವೇರ್, ದಿಯಾ ಸಿಸ್ಟಮ್ಸ್, ಅದ್ವೈತ ಸಿಸ್ಟಮ್ಸ್ ಭಾಗವಹಿಸಲಿವೆ. ಉತ್ಪಾದನಾ ವಲಯ, ಶೈಕ್ಷಣಿಕ ವಲಯ, ಕಟ್ಟಡ ನಿರ್ಮಾಣ– ಸಿಮೆಂಟ್ ಉತ್ಪಾದನಾ ವಲಯಗಳಿಗೆ ನೇಮಕಾತಿ ನಡೆಯುತ್ತದೆ. ಮೆಕ್ಯಾನಿಲ್‌ ಎಂಜಿನಿಯರಿಂಗ್‌ ಪದವೀಧರರ ಬೇಡಿಕೆ ಹೆಚ್ಚಾಗುತ್ತಿರುವುದು ಆಶಾದಾಯಕವಾಗಿದೆ ಎಂದು ವಿವರಿಸಿದರು.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ 9008907716, 9663190590, 9741440490, ಕಂಪನಿಗಳು ಹೆಚ್ಚಿನ ಮಾಹಿತಿಗೆ 8971250414 ಈ ಸಂಖ್ಯೆ ಸಂಪರ್ಕಿಸಬಹುದು. ಅಭ್ಯರ್ಥಿಗಳು 5ರಿಂದ 10 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಅಂಕಪಟ್ಟಿಯ ಝೆರಾಕ್ಸ್, ಆನ್‌ಲೈನ್ ನೋಂದಣಿಯ ಐಡಿ ಜತೆಗೆ ಬೆಳಿಗ್ಗೆ 8 ಗಂಟೆಗೆ ಸ್ಥಳದಲ್ಲಿ ಹಾಜರಿರಬೇಕು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಸುಶಾಂತ್ ಅನಿಲ್ ಲೋಬೊ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಪದ್ಮನಾಭ ಶೆಣೈ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.