ADVERTISEMENT

ಕೆಸೆಟ್ ಪರೀಕ್ಷಾ ಕೇಂದ್ರ ಉಡುಪಿಗೆ ಸ್ಥಳಾಂತರ

ಗರಿಷ್ಠ ಅರ್ಜಿಗಳು ಬಂದರೆ ಮಂಗಳೂರಿನಲ್ಲೂ ಕೇಂದ್ರ: ಕೆಇಎ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 4:53 IST
Last Updated 25 ಜುಲೈ 2024, 4:53 IST
<div class="paragraphs"><p>ಕೆಇಎ</p></div>

ಕೆಇಎ

   

ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (ಕೆಸೆಟ್‌) ಅಧಿಸೂಚನೆ ಹೊರಡಿಸಿದ್ದು, ಈ ಬಾರಿ ದಕ್ಷಿಣ ಕನ್ನಡದ ಬದಲಾಗಿ ಉಡುಪಿ ಜಿಲ್ಲೆಗೆ ಪರೀಕ್ಷಾ ಕೇಂದ್ರವನ್ನು ಸ್ಥಳಾಂತರಿಸಲಾಗಿದೆ.

ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯ 13 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ನೆರೆಯ ಕಾಸರಗೋಡು, ಉಡುಪಿ, ಉತ್ತರ ಕನ್ನಡ ಜಿಲ್ಲೆಯ 5,800ಕ್ಕೂ ಹೆಚ್ಚು ಮಂದಿ ಪರೀಕ್ಷೆ ಬರೆದಿದ್ದರು. ಈ ಬಾರಿಯ ಪರೀಕ್ಷೆಗೆ ಜುಲೈ 13ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ದಕ್ಷಿಣ ಕನ್ನಡ ಕೇಂದ್ರವನ್ನು ಕೈಬಿಟ್ಟು ಉಡುಪಿ ಜಿಲ್ಲೆಯನ್ನು ನಿಗದಿಪಡಿಸಲಾಗಿದೆ. ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಜಿಲ್ಲೆಯ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಅಭ್ಯರ್ಥಿಗಳು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ADVERTISEMENT

ಜು.22ರಂದು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಗಸ್ಟ್ 22 ಕೊನೆಯ ದಿನವಾಗಿದೆ. ನವೆಂಬರ್ 24ರಂದು ಕೆಸೆಟ್ ಪರೀಕ್ಷೆ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

‘ಎಲ್ಲ ರೀತಿಯ ಸಾರಿಗೆ ಸಂಪರ್ಕ ಇರುವ ಮಂಗಳೂರಿನಲ್ಲಿ ವಿವಿಧ ಪರೀಕ್ಷೆಗಳು ನಡೆಯುತ್ತವೆ. ಕಳೆದ ವರ್ಷ ಇಲ್ಲಿಯೇ ಪರೀಕ್ಷೆ ನಡೆದಿದ್ದರಿಂದ ಗಡಿನಾಡು ಕಾಸರಗೋಡಿನ ಅಭ್ಯರ್ಥಿಗಳಿಗೆ ಅನುಕೂಲವಾಗಿತ್ತು. ಉಡುಪಿ ಕೇಂದ್ರವಾದರೆ, ಹೆಚ್ಚುವರಿಯಾಗಿ ಒಂದೂವರೆ ತಾಸು ಪ್ರಯಾಣ ಮಾಡಬೇಕಾಗುತ್ತದೆ’ ಎಂದು ಕಾಸರಗೋಡಿನ ಅಭ್ಯರ್ಥಿ ಗಿರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು. 

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಘಟ್ಟದ ಮೇಲಿನ ಭಾಗದ ಅಭ್ಯರ್ಥಿಗಳು ಹುಬ್ಬಳ್ಳಿ ಕೇಂದ್ರವನ್ನು ಆಶ್ರಯಿಸಿದರೆ, ಘಟ್ಟದ ಕೆಳಗಿನ ತಾಲ್ಲೂಕುಗಳಿಗೆ ಕರಾವಳಿ ಭಾಗದ ಕೇಂದ್ರಗಳು ಹೆಚ್ಚು ಅನುಕೂಲ’ ಎಂದು ಹೊನ್ನಾವರದ ಸುರೇಶ್ ಪ್ರತಿಕ್ರಿಯಿಸಿದರು.

‘ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗವನ್ನು ಗಮನದಲ್ಲಿಟ್ಟು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ನಡುವಿನ ಉಡುಪಿಯಲ್ಲಿ ಕೆಸೆಟ್ ಪರೀಕ್ಷಾ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ. ರೈಲ್ವೆ ನಿಲ್ದಾಣವೂ ನಗರಕ್ಕೆ ಸಮೀಪದಲ್ಲಿದ್ದು, ರೈಲಿನ ಮೂಲಕ ತಲುಪುವವರಿಗೂ ಸಹಾಯವಾಗುತ್ತದೆ. ವರ್ಷಬಿಟ್ಟು ವರ್ಷ ಒಂದು ಜಿಲ್ಲೆಯಲ್ಲಿ ಮಾಡಬಹುದಾಗಿದ್ದು, ಮುಂದಿನ ವರ್ಷ ಮತ್ತೆ ದಕ್ಷಿಣ ಕನ್ನಡದಲ್ಲಿ ಮಾಡಬಹುದು’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದರು.

‘ಅರ್ಜಿ ಸಲ್ಲಿಸಲು ಇನ್ನೂ ಕಾಲಾವಕಾಶ ಇದ್ದು, ಸಲ್ಲಿಕೆಯಾಗಿರುವ ಅರ್ಜಿ ಆಧರಿಸಿ ಕೇಂದ್ರಗಳನ್ನು ನಿರ್ಧರಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ ಅರ್ಜಿಗಳು ಬಂದರೆ, ಅಲ್ಲಿ ಇನ್ನೊಂದು ಪರೀಕ್ಷಾ ಕೇಂದ್ರ ತೆರೆಯಲು ಅವಕಾಶ ಇದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.