ಮಂಗಳೂರು: ‘ಸುಸ್ತಾಗಿ ಮನೆಗೆ ಬಂದಾಗ ತಾಯಿ ನೀಡುವ ಕಾಫಿ ಉತ್ಸಾಹವನ್ನು ಹೆಚ್ಚಿಸುತ್ತದೆ. ಅದೇ ರೀತಿ ಕೊಂಕಣಿ ತಾಯಿ ಕೊಡಮಾಡುವ ಈ ಪುರಸ್ಕಾರವು ನಿಹಾಲ್ ಅವರ ಉತ್ಸಾಹವನ್ನು ನೂರ್ಮಡಿಗೊಳಿಸಲಿ’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.
ನಗರದ ಕಲಾಂಗಣದ ಬಯಲು ರಂಗಮಂದಿರದಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಇಂಡಿಯನ್ ಐಡಲ್ ಖ್ಯಾತಿಯ ನಿಹಾಲ್ ತಾವ್ರೊ ಅವರಿಗೆ ಶಾಲು, ಫಲಪುಷ್ಪ, ಸ್ಮರಣಿಕೆ, ಪ್ರಮಾಣಪತ್ರ ಹಾಗೂ ₹25ಸಾವಿರ ನಗದುಗಳನ್ನು ಒಳಗೊಂಡ 17 ನೇ ಕಲಾಕಾರ್ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು.
‘ಇಲ್ಲಿ ಹಾಜರಿರುವ ಜನರು ಭಾಗ್ಯವಂತರು. ಏಕೆಂದರೆ ನಾವು ಎರಡು ಲಾಕ್‌ಡೌನ್ ಮತ್ತು ಕೋವಿಡ್ ಆವಾಂತರಗಳನ್ನು ಜಯಿಸಿ ಬಂದವರು. ಕೋವಿಡ್–19 ನಮಗೆ ಜೀವನದ ಅರ್ಥ ಕಲಿಸಿದೆ. ಇನ್ನೊಬ್ಬರ ಕಾಳಜಿ ಮಾಡುವ ಹಾಗೂ ಸಹಕಾರದಲ್ಲಿ ಜೀವಿಸುವ ಪಾಠ ಮಾಡಿದೆ’ ಎಂದರು.
ಜಯಂತ ಕಾಯ್ಕಿಣಿ ಬರೆದ ‘ನಿನ್ನಿಂದಲೇ’ ಹಾಡನ್ನು ಹಾಡಿದ ನಿಹಾಲ್ ತಾವ್ರೋ, ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಪುರಸ್ಕಾರದ ಬಗ್ಗೆ ಕಾರ್ವಾಲ್ ಮನೆತನದ ಜೆನೆವಿವ್ ಲೂವಿಸ್ ಮಾಹಿತಿ ನೀಡಿದರು. ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಜೆ. ಪಿಂಟೊ, ಸ್ಟ್ಯಾನಿ ಆಲ್ವಾರಿಸ್, ಕಿಶೋರ್ ಫರ್ನಾಂಡಿಸ್ ವೇದಿಕೆಯಲ್ಲಿದ್ದರು. ಉಪಾಧ್ಯಕ್ಷ ಸುನೀಲ್ ಮೊಂತೇರೊ ಸನ್ಮಾನಪತ್ರ ವಾಚಿಸಿದರು. ಐರಿನ್ ರೆಬೆಲ್ಲೊ ನಿರೂಪಿಸಿದರು. ಕಾರ್ವಾಲ್ ಮನೆತನದ ಸದಸ್ಯರಾದ ಫಾ. ಪ್ರತಾಪ್ ನಾಯ್ಕ್, ಜೊನ್ ಕಾರ್ವಾಲ್, ವಲೇರಿಯನ್ ಕಾರ್ವಾಲ್, ಫ್ಲೊರಿನ್ ಲೋಬೊ, ಫೆಲಿಕ್ಸ್ ಲೋಬೊ, ಲಿಬೆರ್ತಾ ಕಾರ್ವಾಲ್, ರೆನಿಟಾ ಲೋಬೊ, ಜೆಫ್ರಿ ಕಾರ್ವಾಲ್ ಮತ್ತು ಜಾನಿಸ್ ಕಾರ್ವಾಲ್ ಹಾಗೂ ನಿಹಾಲ್ ಕುಟುಂಬಸ್ಥರಾದ ಹೆರಾಲ್ಡ್ ಪ್ರೆಸಿಲ್ಲಾ ತಾವ್ರೊ ಮತ್ತು ನಿಶಾನ್ ತಾವ್ರೊ ಹಾಜರಿದ್ದರು.
ನಂತರ ಶೇಕ್ಸ್ ಪಿಯರ್ ರಚಿತ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ನ ಕೊಂಕಣಿ ಅನುವಾದ ‘ಗಿಮಾಳ್ಯೆ ರಾತಿಚೆಂ ಸ್ವಪಣ್’ ನಾಟಕ ತಿಂಗಳ ವೇದಿಕೆ ಸರಣಿಯ 239 ನೇ ಕಾರ್ಯಕ್ರಮವಾಗಿ ಮಾಂಡ್ ತಂಡದ ಕಲಾವಿದರು ಅಭಿನಯಿಸಿದರು.
ಈ ನಾಟಕವನ್ನು ಅರುಣ್ ರಾಜ್ ರಾಡ್ರಿಗಸ್ ಅನುವಾದಿಸಿ, ವಿದ್ದು ಉಚ್ಚಿಲ್ ನಿರ್ದೇಶನ ನೀಡಿದ್ದರು. ಆಲ್ಬನ್ ಹೊನ್ನಾವರ್, ಆಲ್ಸನ್ ಪೆರ್ಮನ್ನೂರ್, ಆಮ್ರಿನ್ ಶಕ್ತಿನಗರ, ಆಡ್ಲಿನ್ ಬೆಳ್ಮಣ್ಣು, ಇಮಾನಿ ಕುಲ್ಶೇಕರ, ಫ್ಲಾವಿಯಾ ಶಕ್ತಿನಗರ, ಜಾಸ್ಮಿನ್ ವಾಮಂಜೂರು, ಜೀವನ್ ಮುಂಡಗೋಡು, ಪ್ರೀತಿಕಾ ವಾಮಂಜೂರು, ಸಂದೀಪ್ ಶಕ್ತಿನಗರ, ಸ್ಯಾಮುವೆಲ್ ಗುರುಪುರ್, ಸುಜಯಾ ವಾಲೆನ್ಶಿಯಾ, ವಿನ್ಸನ್ ಕಿರೆಂ, ವ್ರೀಥನ್ ಬಜ್ಜೋಡಿ, ರೊಮಾರಿಯೊ ಶಕ್ತಿನಗರ ಮಾಂಡ್ ತಂಡದಲ್ಲಿ ಇದ್ದರು.
ಕೇತನ್ ಕ್ಯಾಸ್ತೆಲಿನೊ, ರೆನಾಲ್ಡ್ ಲೋಬೊ ಮತ್ತು ಮನೀಶ್ ಪಿಂಟೊ ಸಂಗೀತದಲ್ಲಿ ಸಹಕರಿಸಿದರು. ಶಿವರಾಮ್ ರಂಗ ಸಜ್ಜಿಕೆ ಮತ್ತು ವೇಷಭೂಷಣ ನಿರ್ವಹಣೆ, ಕಿಂಗ್ ಸ್ಲೀ ನಜ್ರೆತ್ ಬೆಳಕು ಹಾಗೂ ಸುರಭಿ ಸೌಂಡ್ಸ್ ಧ್ವನಿ ವ್ಯವಸ್ಥೆ ನಿರ್ವಹಿಸಿದರು.
‘ಪುರಸ್ಕಾರಗಳು ಪ್ರೇರಣೆ’
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿಹಾಲ್, ‘ಸಣ್ಣ ಊರಿನಿಂದ ಬಂದ ನನಗೆ ಈ ಪರಿಯ ಪ್ರೀತಿ ನೀಡಿದಕ್ಕಾಗಿ ಕೃತಜ್ಞತೆಗಳು. ಈ ಬೆಳವಣಿಗೆಯ ಹಿಂದೆ ಪೋಷಕರ ಹಾಗೂ ಅಭಿಮಾನಿಗಳ ಶ್ರಮವಿದೆ. ಯುವ ಗಾಯಕರ ಕನಸಾದ ಇಂಡಿಯನ್ ಐಡಲ್ ವೇದಿಕೆಯಲ್ಲಿ ಅಂತಿಮ ಹಂತಕ್ಕೆ ತಲುಪುವ ಕನಸನ್ನು ನಾನು ಜಯಿಸಿದ್ದೇನೆ. ಆದರೆ ಇದೇ ಕೊನೆಯಲ್ಲ, ಮುಂದಿನ ಎತ್ತರವನ್ನು ಇನ್ನೂ ಹೆಚ್ಚಿನ ಶ್ರಮ ಹಾಕಿ ತಲುಪಲು ಇಂತಹ ಪುರಸ್ಕಾರಗಳು ಪ್ರೇರಣೆ ನೀಡುತ್ತವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.