ಉಳ್ಳಾಲ: ನಾಟೆಕಲ್ ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ 3ನೇ ಘಟಿಕೋತ್ಸವ ಈ ನಿಟ್ಟಿನಲ್ಲಿ ಏ.20ರಂದು ನಡೆಯಲಿದೆ ಎಂದು ಕಣಚೂರು ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಅಬ್ದುಲ್ ರಹಿಮಾನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಅಧೀನದ 50 ವೈದ್ಯಕೀಯ ಕಾಲೇಜುಗಳ ಪೈಕಿ 2018ರ ಬ್ಯಾಚ್‌ನಲ್ಲಿ ಕಣಚೂರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಡಾ.ಮಧುರಾ ಕೆ.ಐ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದು, ಕಾಲೇಜು ಆರಂಭದ ಮೂರು ವರ್ಷದ ಅವಧಿಯಲ್ಲಿ ವಿದ್ಯಾರ್ಥಿನಿಯ ಸಾಧನೆ ಶ್ರೇಷ್ಠವಾಗಿದೆ. 20ರಂದು ನಡೆಯುವ ಕಾರ್ಯಕ್ರಮದಲ್ಲಿ ಯು.ಕೆ.ಮೋನು ದತ್ತಿನಿಧಿ ಪ್ರಶಸ್ತಿ ಹೆಸರಿನಲ್ಲಿ 8 ಗ್ರಾಂನ ಚಿನ್ನದ ಪದಕ ನೀಡಲಾಗುವುದು ಎಂದು ಅವರು ತಿಳಿಸಿದರು.
ಪದವಿ ಪ್ರದಾನ ಸಮಾರಂಭವು ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಪದವಿ ಪ್ರದಾನ ಮಾಡುವರು. ಸಂಸ್ಥೆಯ ಅಧ್ಯಕ್ಷ ಯು.ಕೆ.ಮೋನು ಅಧ್ಯಕ್ಷತೆ ವಹಿಸಲಿದ್ದು, ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಯು.ಟಿ.ಇಫ್ತಿಕರ್ ಅಲಿ, ಡೀನ್ ಡಾ.ರತ್ನಾಕರ್ ಭಾಗವಹಿಸಲಿದ್ದಾರೆ ಎಂದರು.
ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಡೀನ್ ಡಾ.ಯು.ಪಿ.ರತ್ನಾಕರ್ ಮಾತನಾಡಿ, 2018ರ ಬ್ಯಾಚ್‌ನಲ್ಲಿ ಶೇ 99.25 ಫಲಿತಾಂಶ ಬಂದಿದ್ದು, 7 ಮಂದಿ ವಿವಿಧ ವಿಭಾಗಗಳಲ್ಲಿ 18ರ‍್ಯಾಂಕ್ ಪಡೆದುಕೊಂಡಿದ್ದಾರೆ. ಡಾ.ಮಧುರಾ ಕೆ.ಐ 10 ರ‍್ಯಾಂಕ್ ಪಡೆದಿದ್ದು, ಈ ಸಾಲಿನಲ್ಲಿ ಶೇ 100 ಫಲಿತಾಂಶ ದಾಖಲಾಗಿದೆ ಎಂದರು.
ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಪ್ರಾಂಶುಪಾಲರಾದ ಡಾ.ಶಮಿಮಾ, ಫಿಜಿಯೋಥೆರಪಿ ವಿಭಾಗದ ಪ್ರಾಂಶುಪಾಲ ಪ್ರೊ.ಮಹಮ್ಮದ್ ಸುಹೈಲ್, ನರ್ಸಿಂಗ್ ವಿಭಾಗದ ಪ್ರಾಂಶುಪಾಲೆ ಡಾ.ಮೋನಿ ಸಲ್ದಾನ, ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ರೋಹನ್ ಮೋನಿಸ್, ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ಶೆಟ್ಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.