ADVERTISEMENT

ತುಳುನಾಡ ವೈವಿಧ್ಯ ‘ಆಟಿದ ಕೂಟ’ ನಾಳೆ

ತುಳುವರ ಅಡುಗೆ, ಬಳಕೆಯಲ್ಲಿದ್ದ ಪರಿಕರಗಳ ಪ್ರದರ್ಶನ; ನಾಟಿವೈದ್ಯೆ, ದೈವನರ್ತಕರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 20:36 IST
Last Updated 26 ಜುಲೈ 2024, 20:36 IST
ಪತ್ರಿಕಾಗೋಷ್ಠಿಯಲ್ಲಿ ಸತ್ಯನಂಜನ್ ಭಂಡಾರಿ ಮಾತನಾಡಿದರು. ರಾಜೇಶ್ ಪಾಟಾಳಿ, ರಾಜೇಶ್ ನಾಯರ್‌, ರಾಜೇಶ್ವರಿ ಡಿ.ಶೆಟ್ಟಿ ಮತ್ತು ಗಣೇಶ್ ಎಚ್.ಆರ್ ಪಾಲ್ಗೊಂಡಿದ್ದರು
ಪತ್ರಿಕಾಗೋಷ್ಠಿಯಲ್ಲಿ ಸತ್ಯನಂಜನ್ ಭಂಡಾರಿ ಮಾತನಾಡಿದರು. ರಾಜೇಶ್ ಪಾಟಾಳಿ, ರಾಜೇಶ್ ನಾಯರ್‌, ರಾಜೇಶ್ವರಿ ಡಿ.ಶೆಟ್ಟಿ ಮತ್ತು ಗಣೇಶ್ ಎಚ್.ಆರ್ ಪಾಲ್ಗೊಂಡಿದ್ದರು   

ಮಂಗಳೂರು: ‘ಆಟಿ’ ತಿಂಗಳ ವೈಶಿಷ್ಟ್ಯವನ್ನು ತಿಳಿಸಲು ಮತ್ತು ಮೂಲಕ್ಕೆ ಹಿಂದಿರುಗುವ ಆಶಯದೊಂದಿಗೆ ಕಂಗೆನ್ ಡಿಸ್ಟ್ರಿಬ್ಯೂಟರ್ಸ್ ಕ್ಲಬ್‌ (ಕೆಡಿಸಿ) ಆಯೋಜಿಸಿರುವ ಆಟಿದ ಕೂಟ ಇದೇ 28ರಂದು ನಗರದ ಶಾರದಾ ವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.

‘ಜಪಾನ್‌ನ ಇನಾಜಿಕ್ ಕಂಪನಿ ಸಿದ್ಧಪಡಿಸುವ ಆರೋಗ್ಯ ಪರಿಕರ ‘ಕಂಗೆನ್‌’ ವಿತರಣೆ ಮಾಡುವ ಕೆಡಿಸಿ ಇದೇ ಮೊದಲು ಆಟಿಗೆ ಸಂಬಂಧಿಸಿದ ಕಾರ್ಯಕ್ರಮ ಆಯೋಜಿಸುತ್ತಿದ್ದು ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಎಂಆರ್‌ಪಿಎಲ್‌ ನಿವೃತ್ತ ಮಹಾಪ್ರಬಂಧಕಿ ವೀಣಾ ಟಿ.ಶೆಟ್ಟಿ ದಿಕ್ಸೂಚಿ ಭಾಷಣ ಮಾಡುವರು. ನಟಿ ನಿರೀಕ್ಷಾ ಶೆಟ್ಟಿ ಉದ್ಘಾಟಿಸುವರು’ ಎಂದು ಕಾರ್ಯಕ್ರಮದ ಸಂಚಾಲಕಿ ರಾಜೇಶ್ವರಿ ಡಿ.ಶೆಟ್ಟಿ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್‌, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಶ್ರೀನಾಥ್‌, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್‌, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೊಕಿಂ ಸ್ಟ್ಯಾನಿ ಅಲ್ವಾರಿಸ್ ಪಾಲ್ಗೊಳ್ಳುವರು ಎಂದು ತಿಳಿಸಿದರು.

ADVERTISEMENT

‘ನಿವೃತ್ತ ಯೋಧ ಬಾಲಕೃಷ್ಣ ಭಂಡಾರಿ, ದೈವ ನರ್ತಕ ಉಮೇಶ್ ಪಂಬದ, ನಾಟಿ ವೈದ್ಯೆ ಲಲಿತಾ ಪೂಜಾರ್ತಿ ಶಿಬರೂರು, ಕಂಬಳ ಕ್ಷೇತ್ರದ ಕೊಳಕೆ ಇರ್ವತ್ತೂರು ಆನಂದ, ಸಾಮಾಜಿಕ ಕಾರ್ಯಕರ್ತೆ ನಫೀಸಾ ಅವರನ್ನು ಗೌರವಿಸಲಾಗುವುದು. ತುಳುನಾಡ ಜನರ ಬದುಕಿನ ಅವಿಭಾಜ್ಯ ಅಂಗವಾಗಿದ್ದ, ತುಳು ಸಂಸ್ಕೃತಿಗೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಪರಿಕರ, ಆಟಿ ತಿಂಗಳಲ್ಲಿ ತುಳುನಾಡ ಜನರು ಸೇವಿಸುತ್ತಿದ್ದ ತಿಂಡಿಯ ಪ್ರದರ್ಶನ ಇರಲಿದೆ’ ಎಂದು ಅವರು ವಿವರಿಸಿದರು.

ಕೆಡಿಸಿ ನಿರ್ದೇಶಕ ರಾಜೇಶ್ ನಾಯರ್‌, ಪ್ರಧಾನ ಸಂಚಾಲಕ ಸತ್ಯನಂಜನ್ ಭಂಡಾರಿ, ಸಂಚಾಲಕರಾದ ಗಣೇಶ್ ಎಚ್.ಆರ್ ಮತ್ತು ರಾಜೇಶ್ ಪಾಟಾಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.