ADVERTISEMENT

ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಪಿಐಎಲ್: ಮಹೇಶ್ ಜೋಶಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2023, 4:23 IST
Last Updated 6 ಡಿಸೆಂಬರ್ 2023, 4:23 IST
ಮಹೇಶ್ ಜೋಶಿ
ಮಹೇಶ್ ಜೋಶಿ   

ಮಂಗಳೂರು: ಸರ್ಕಾರಿ ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ವಿನಂತಿಸಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಡಿ.13ರಂದು ಬೆಂಗಳೂರಿನಲ್ಲಿ ನಿವೃತ್ತ ನ್ಯಾಯಾಧೀಶರು, ಕನ್ನಡ ಪರ ಸಂಘಟನೆಗಳು, ಹೋರಾಟಗಾರರನ್ನು ಒಳಗೊಂಡ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಪ್ರಸ್ತುತ 27 ಸಾವಿರ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯದ ಕೊರತೆ ಇದೆ. ಮೂಲ ಸೌಕರ್ಯ ಕೊರತೆ ಇರುವ ಶಾಲೆಗಳಲ್ಲಿ ಹೆಚ್ಚು ಮಕ್ಕಳನ್ನು ನಿರೀಕ್ಷಿಸಲು ಸಾಧ್ಯವಾಗದು. ಈ ಬಗ್ಗೆಯೂ ಚರ್ಚಿಸಲಾಗುವುದು ಎಂದರು.

‘ಮಂಡ್ಯದಲ್ಲಿ ನಡೆಯಬೇಕಾಗಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅನಾವೃಷ್ಟಿಯ ಕಾರಣ ನೀಡಿ 2024ಕ್ಕೆ ಮುಂದೂಡಲಾಗಿದೆ. ಸಮ್ಮೇಳನದ ವಿಚಾರದಲ್ಲಿ ಸಾಹಿತ್ಯ ಪರಿಷತ್ತಿನ ಜೊತೆ ಸರ್ಕಾರ ಚರ್ಚಿಸಿಲ್ಲ. ಕನ್ನಡ ಚಟುವಟಿಕೆಗಳಿಗೆ ಬಜೆಟ್‌ನಲ್ಲಿ ಅನುದಾನ ನಿಗದಿಪಡಿಸಿಲ್ಲ. ನಾನು ಮುಖ್ಯಮಂತ್ರಿ ಮನೆ ಬಾಗಿಲು ಕಾಯುವವನಲ್ಲ. ಹಿಂದಿನ ಎಲ್ಲ ಮುಖ್ಯಮಂತ್ರಿಗಳು ಸಾಹಿತ್ಯ ಪರಿಷತ್ತಿಗೆ ಗೌರವ ನೀಡುತ್ತಿದ್ದರು. ಜೊತೆಗೆ ಅನುದಾನ ಒದಗಿಸುತ್ತಿದ್ದರು. ಆಹ್ವಾನ ನೀಡಿದರೂ, ಈಗಿನ ಮುಖ್ಯಮಂತ್ರಿ ಸಾಹಿತ್ಯ ಪರಿಷತ್ತಿನ ಕಚೇರಿಗೆ ಇನ್ನೂ ಭೇಟಿ ನೀಡಿಲ್ಲ. ಸಭೆ, ಸಮಾರಂಭಗಳಲ್ಲಿ ಭೇಟಿಯಾದಾಗ ‘ನನ್ನನ್ನು ನೀವು ಕರೆಯುವುದಿಲ್ಲ’ ಎನ್ನುತ್ತಾರೆ. ಕನ್ನಡದ ಉಳಿವಿಗೆ ಸರ್ಕಾರವು ಸಾಹಿತ್ಯ ಪರಿಷತ್ತು ಜೊತೆ ಕೈಜೋಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.