ADVERTISEMENT

ಕಾಪಿನಬಾಗಿಲು ಮನೆ ಧ್ವಂಸ ಪ್ರಕರಣ: ಕಡಬದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 13:20 IST
Last Updated 21 ನವೆಂಬರ್ 2024, 13:20 IST
ಕಡಬ ತಾಲ್ಲೂಕು ಕಾಪಿನಬಾಗಿಲುವಿನಲ್ಲಿ ಮನೆ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದ ರಾಧಮ್ಮ ಮತ್ತು ಮುತ್ತುಸ್ವಾಮಿ ದಂಪತಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು
ಕಡಬ ತಾಲ್ಲೂಕು ಕಾಪಿನಬಾಗಿಲುವಿನಲ್ಲಿ ಮನೆ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದ ರಾಧಮ್ಮ ಮತ್ತು ಮುತ್ತುಸ್ವಾಮಿ ದಂಪತಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು   

ಕಡಬ (ಉಪ್ಪಿನಂಗಡಿ): ‘ಕಡಬ ತಾಲ್ಲೂಕು ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದಲ್ಲಿ ವಾಸವಿದ್ದ ರಾಧಮ್ಮ ಮತ್ತು ಮುತ್ತುಸ್ವಾಮಿ ಎಂಬುವರ ಮನೆಯನ್ನು ನ್ಯಾಯಾಲಯದ ಆದೇಶ ಇದೆ ಎಂದು ತಿಳಿಸಿ ಕಡಬ ತಹಶೀಲ್ದಾರ್ ಉಪಸ್ಥಿತಿಯಲ್ಲಿ ಜೆಸಿಬಿ ಮೂಲಕ ಕೆಡವಿ ಅಧಿಕಾರಿಗಳು ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಕಡಬ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ರಾಧಮ್ಮ ಮತ್ತು ಮುತ್ತುಸ್ವಾಮಿ ದಂಪತಿ ನಜ್ಜುಗುಜ್ಜಾಗಿದ್ದ ಪಾತ್ರೆ ಹಾಗೂ ಇತರ ಸಾಮಗ್ರಿಯೊಂದಿಗೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ನೀತಿ ಸಂಘಟನೆಯ ಜಯಂತ್ ಮಾತನಾಡಿ, ‘ವೃದ್ಧ ದಂಪತಿ ವಾಸವಿದ್ದ, ಸುಮಾರು ಹತ್ತು ವರ್ಷ ಹಳೆಯ ಮನೆಯನ್ನು ನೋಟಿಸ್‌ ಇಲ್ಲದೆ, ಆದೇಶವೂ ಇಲ್ಲದೆ ಕಡಬ ತಶೀಸೀಲ್ದಾರ್, ಇಲಾಖೆ ಅಧಿಕಾರಿಗಳ ಜೊತೆ ಬಂದು ಪೊಲೀಸರ ಸಹಕಾರದಲ್ಲಿ ಧ್ವಂಸ ಮಾಡಿದ್ದಾರೆ. ಪ್ರಶ್ನಿಸಿದ್ದಕ್ಕೆ ರೇಣುಕಾ ಹೆಸರಲ್ಲಿ ಮನೆ ತೆರವುಗೊಳಿಸಲು ನ್ಯಾಯಾಲಯದ ಆದೇಶ ಇದೆ ಎಂದು ಉತ್ತರಿಸಿದ್ದಾರೆ. ರೇಣುಕಾ ಮನೆ ಎನ್ನುವುದಕ್ಕೆ ದಾಖಲೆ ಕೊಡಿ ಎಂದರೆ ಯಾವುದೇ ದಾಖಲೆ ನೀಡಿಲ್ಲ. ದಂಪತಿಯನ್ನು ಬೀದಿ ಪಾಲು ಮಾಡಲಾಗಿದೆ’ ಎಂದು ದೂರಿದರು.

ADVERTISEMENT

ಸಿಪಿಎಂ ಮುಖಂಡ ಬಿ.ಎಂ.ಭಟ್ ಮಾತನಾಡಿ, ‘ಸುಳ್ಳು ವರದಿ ನೀಡುತ್ತಿರುವ ಕಡಬ ತಹಶೀಲ್ದಾರ್ ಅವರನ್ನು ಅಮಾನತು ಮಾಡಬೇಕು. ಇಲ್ಲದೆ ಇದ್ದರೆ ಅವರ ಸ್ವಂತ ವೆಚ್ಚದಲ್ಲಿ ದಂಪತಿಗೆ ಮನೆ ನಿರ್ಮಿಸಿಕೊಡಬೇಕು’ ಎಂದರು.

ಬೆಳ್ತಂಗಡಿ ತಾಲ್ಲೂಕು ಕಾಂಗ್ರೆಸ್ ಯುವ ಘಟಕದ ಗ್ರಾಮೀಣ ಅಧ್ಯಕ್ಷ ಎಸ್.ಕೆ.ಹಕೀಂ, ಕೆ.ಆರ್.ಎಸ್.ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವೇಣುಗೋಪಾಲ್, ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷೆ ಈಶ್ವರಿ ಶಂಕರ್, ದಲಿತ ಮುಖಂಡ ಬಾಬು ಮಾತನಾಡಿದರು.

ಉಪ ವಿಭಾಗಾಧಿಕಾರಿ ಭೇಟಿ, ಭರವಸೆ: ಪುತ್ತೂರು ಉಪ ವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಅವರನ್ನು ಪ್ರತಿಭಟನಕಾರರ ಪರವಾಗಿ ಬಂದಿದ್ದ ಬಿ.ಎಂ.ಭಟ್ ಸೇರಿದಂತೆ ಹಲವರು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪ್ರತಿಕ್ರಿಸಿದ ಅವರು, ‘ಒಂದು ವಾರದೊಳಗೆ ಮನೆ ಧ್ವಂಸ ಪ್ರಕರಣದ ತನಿಖೆ ಮಾಡಲಾಗುವುದು. ನಮ್ಮ ಕಡೆಯಿಂದ ತಪ್ಪು ಆಗಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಅಲ್ಲದೆ, 94/ಸಿ ಅಡಿಯಲ್ಲಿ ಹಕ್ಕು ಪತ್ರ ನೀಡುವ ಬಗ್ಗೆಯೂ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದ್ದಾರೆ ಎಂದು ಜಯಂತ್ ತಿಳಿಸಿದರು.

ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಎಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದರು. ಬಳಿಕ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.